ನವದೆಹಲಿ : ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಅನುಕೂಲವಾಗುವಂತೆ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ತಾತ್ಕಾಲಿಕವಾಗಿ ಅಳವಡಿಸಿಕೊಳ್ಳುವ ಕುರಿತು ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಇಂದು ನಿರ್ದೇಶಿಸಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ನಿಂದಾಗಿ ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಫಲಾನುಭವಿಗಳು ಮತ್ತು ಇತರ ರಾಜ್ಯಗಳ ನಾಗರಿಕರ ಅನುಕೂಲಕ್ಕಾಗಿ ಈ ಯೋಜನೆಯನ್ನು ಅನುಷ್ಠಾನ ಕೋರಿ ವಕೀಲ ರೀಪಕ್ ಕನ್ಸಾಲ್ ಅವರು ಮನವಿ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ ಕೂಡ ಈ ಯೋಜನೆಯನ್ನು ಇದೇ ವರ್ಷ ಜೂನ್ ನಿಂದ ಜಾರಿಗೆ ತರಲು ಚಿಂತನೆ ನಡೆಸಿತ್ತು. ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ, ಈ ಹಂತದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಸಾಧ್ಯವಿದಯೇ ಅಥವಾ ಇಲ್ಲವೇ ಎಂಬುವುದನ್ನು ಪರಿಗಣಿಸಲು ನಾವು ಕೇಂದ್ರ ಸರ್ಕಾರವನ್ನು ಕೇಳುತ್ತಿದ್ದೇವೆ. ಪ್ರಸ್ತುತ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದೆ.