ಸುಳ್ಯ: ಮಸೀದಿ ಹೊರ ಭಾಗದಲ್ಲಿರುವ ಗೋರಿ ಅಗೆದು ಮಾನಸಿಕ ಅಸ್ವಸ್ಥನೊಬ್ಬ ಆತಂಕ ಸೃಷ್ಟಿಸಿದ ಘಟನೆ ಜಾಲ್ಸೂರು ಗ್ರಾಮದ ಮಾಪಳಡ್ಕ ದರ್ಗಾದಲ್ಲಿ ನಡೆದಿದೆ.
ರಾತ್ರಿ ಸುಮಾರು 9 ಗಂಟೆಯ ವೇಳೆಗೆ ದರ್ಗಾದ ಬಳಿ ಬಂದಿದ್ದ ಈ ವ್ಯಕ್ತಿ, ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಹಾರೆ ಮತ್ತು ಪಕ್ಕಾಸಿನಿಂದ ಗೋರಿಯನ್ನು ಅಗೆಯಲು ಆರಂಭಿಸಿದ್ದಾನೆ. ಶಬ್ದ ಕೇಳಿ ದರ್ಗಾದ ಪಕ್ಕದಲ್ಲಿದ್ದ ಸಂಸ್ಥೆಯ ಅಡುಗೆ ಸಿಬ್ಬಂದಿ ಮತ್ತು ಇತರರು ಸ್ಥಳಕ್ಕೆ ಧಾವಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅಗೆಯುವುದನ್ನು ತಡೆಯಲು ಹೋದ ಸ್ಥಳೀಯರ ಮೇಲೆ ಆತ ಹಲ್ಲೆಗೂ ಮುಂದಾಗಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಸಂಸ್ಥೆಯ ಅಧ್ಯಕ್ಷರಾದ ಎ.ಬಿ. ಅಶ್ರಫ್ ಸಅದಿ ಮತ್ತು ಸಮಿತಿಯ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಆಗಮಿಸಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಟ್ಟು ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.
ಇನ್ನು ಬಂಧಿತ ವ್ಯಕ್ತಿ ಕಾಸರಗೋಡು ಜಿಲ್ಲೆಯ ಪರಪ್ಪೆ ನಿವಾಸಿ ಎಂದು ಗುರುತಿಸಲಾಗಿದೆ. ಗೋರಿ ಅಗೆಯುವ ಸಂದರ್ಭದಲ್ಲಿ ಆತ “ಇದು ನಮ್ಮ ಅಜ್ಜನ ಗೋರಿ” ಎಂದು ಕೂಗುತ್ತಿದ್ದ ಎನ್ನಲಾಗಿದ್ದು, ಆತ ಮಾನಸಿಕ ಸಮಸ್ಯೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


