ಉಡುಪಿ: ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ತಲ್ಲೂರಿನಲ್ಲಿ ನಡೆದಿದೆ.
ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ ಅರುಣ್ ಕುಮಾರ್‌ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲಾ ಶಿಕ್ಷಕಿ ಭಾರತಿ ದಂಪತಿಯ ಪುತ್ರ ಪೃಥ್ವಿರಾಜ್ ಶೆಟ್ಟಿ (12) ಮೃತ ವಿದ್ಯಾರ್ಥಿ7ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ ಅಕ್ಕ ಕಳೆದ ವರ್ಷ ಅಕ್ಟೋಬರ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಳು. ಮಗಳ ಅಗಲಿಕೆಯ ನೋವಲ್ಲಿರುವ ಪೋಷಕರಿಗೆ ಮಗನ ಸಾವು ಮತ್ತಷ್ಟು ಆಘಾತ ಉಂಟು ಮಾಡಿದೆ.
ಪೃಥ್ವಿರಾಜ್ ಶೆಟ್ಟಿ ಶನಿವಾರ ಬೆಳಗ್ಗೆ ಮನೆಯ ಬಳಿ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಪೃಥ್ವಿರಾಜ್ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಬಾಲಕನನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ. ಹೃದಯಾಘಾತದಿಂದ ಬಾಲಕ ಪೃಥ್ವಿರಾಜ್ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಕಳೆದ ವರ್ಷ ಅ.27 ರಂದು 8ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಅನುಶ್ರೀ (14) ಮನೆಯಲ್ಲಿ ಓದುತ್ತಿರುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಳು. ಅ.20 ಪೃಥ್ವಿರಾಜ್ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಳೆದ ವರ್ಷ ತಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಅಕ್ಕ ಅನುಶ್ರೀ, ಸಂಭ್ರಮ ಮುಗಿದ ಒಂದು ವಾರದ ಒಳಗೆ ಇಹಲೋಕ ತ್ಯಜಿಸಿದ್ದಳು. ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ.


