ಉಡುಪಿ : ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳನ್ನು ಮಾರಕ ಕ್ಯಾನ್ಸರ್ ಬಲಿ ಪಡೆದ ಘಟನೆ ಉಡುಪಿ ಆರೋಗ್ಯ ಮಾತಾ ದೇವಾಲಯದ ಬಳಿಯ ಕಾನ್ವೆಂಟ್ ರಸ್ತೆಯಲ್ಲಿ ನಡೆದಿದೆ. ರಿಯಾನ್ನ ಜೇನ್ ಡಿಸೋಜಾ (20) ಮೃತ ವಿದ್ಯಾರ್ಥಿನಿ.
ರಿಯಾನ್ನ ಜೇನ್ ಡಿಸೋಜಾ ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದಳು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಅತ್ಯುತ್ತಮ ಕಾರ್ಯಕ್ರಮ ಸಂಘಟಕಿಯಾಗಿದ್ದ ಇವರು, ವಿದ್ಯಾಭ್ಯಾಸದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು.ಅತ್ಯುತ್ತಮ ನೃತ್ಯಪಟುವಾಗಿದ್ದ ಇವರು, ಹಲವಾರು ನೃತ್ಯಗಳಿಗೆ ಕೊರಿಯೋಗ್ರಾಫರ್ ಆಗಿ ಸೇವೆಯನ್ನು ಸಲ್ಲಿಸಿದ್ದರು.
ಸ್ನೇಹಮಯಿ ವಿದ್ಯಾರ್ಥಿನಿಯಾಗಿದ್ದ ಇವರು ಸೈಂಟ್ ಮೇರಿಸ್ ವಿದ್ಯಾಸಂಸ್ಥೆ ಮತ್ತು ನಿಟ್ಟೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದರು.ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸ ಆರಂಭಿಸುವಷ್ಟರಲ್ಲಿ ಕ್ಯಾನ್ಸರ್ ಗೆ ತುತ್ತಾಗಿದ್ದರು.ವೈಸಿಎಸ್, ಐಸಿವೈಎಂ ಸದಸ್ಯೆಯಾಗಿದ್ದ ಇವರು ತಾಯಿ, ಸಹೋದರ ಮತ್ತು ಅಪಾರ ಸ್ನೇಹಿತರು ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.