
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಪ್ರಕರಣದಲ್ಲಿ ರಾಕೇಶ್ ಶೆಟ್ಟಿ, ಚಂದನ್, ಮೋಹನ್ ಗೌಡ ಹಾಗೂ ಪ್ರಜ್ವಲ್ ಪ್ರಸಾದ್ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ.
ಇದೀಗ ಕೃಪಾ ಆಳ್ವಾ ಅವರೂ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ಅರ್ಜಿಯ ವಿಚಾರಣೆಯೂ ಇಂದು ನಡೆಯುವ ಸಾಧ್ಯತೆಯಿದೆ.
ಪ್ರಕರಣದ ವಿಚಾರಣೆ ವೇಳೆ ಈ ಹಿಂದೆ ಕೃಪಾ ಆಳ್ವಾ ಅವರು ಖುದ್ದಾಗಿ ಹಾಜರಾಗಿದ್ದರು. ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಅಲ್ಲದೆ, ಕೆಪಿಸಿಸಿ ನೀಡಿದ್ದ ನೋಟಿಸ್ಗೂ ಅವರು ಪ್ರತಿಕ್ರಿಯಿಸಿರಲಿಲ್ಲ ಎಂದು ತಿಳಿದುಬಂದಿದೆ. ಇದೀಗ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.


