
ಮಂಗಳೂರು: ಮೀನುಗಾರಿಕಾ ಬಲೆ ಎಳೆಯುವ ವೇಳೆ ಸಮುದ್ರಕ್ಕೆ ಬಿದ್ದ ಮೀನುಗಾರನನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ನವೆಂಬರ್ 1ರಂದು ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲು (100 ಕಿ.ಮೀ.) ದೂರದಲ್ಲಿ ಕಾರ್ಯಾಚರಿಸುತ್ತಿದ್ದ IFB ಶಿವ ಸಾಗರ್ ಮೀನುಗಾರಿಕಾ ದೋಣಿಯಿಂದ VHF ಮೂಲಕ ತುರ್ತು ಕರೆ ಬಂದಿತ್ತು. ಬಲೆ ಎಳೆಯುವ ಸಂದರ್ಭದಲ್ಲಿ ಮೀನುಗಾರನೊಬ್ಬ ಸಮುದ್ರಕ್ಕೆ ಬಿದ್ದಿದ್ದು, ಬಳಿಕ ದೋಣಿಯ ಸಿಬ್ಬಂದಿ ಆತನನ್ನು ಮೇಲಕ್ಕೆತ್ತಿದ್ದರು. ಆದರೆ, ಆತನಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು.
ಕರೆ ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರ-3 (CGDHQ-3), ICGS C 448 ರಕ್ಷಣಾ ದೋಣಿಯನ್ನು ಸ್ಥಳಕ್ಕೆ ನಿಯೋಜಿಸಿತು. ರಾತ್ರಿ ಕತ್ತಲಿನಲ್ಲಿಯೇ ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚಿದ ಸಿಬ್ಬಂದಿ,
ಅಸ್ವಸ್ಥ ಮೀನುಗಾರನನ್ನು ಸುರಕ್ಷಿತವಾಗಿ ರಕ್ಷಣಾ ದೋಣಿಗೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ನೀಡಿದರು.
ಬಳಿಕ ಆತನನ್ನು ನವ ಮಂಗಳೂರು ಬಂದರಿನ (NMPA) ಜೆಟ್ಟಿಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಕೋಸ್ಟ್ ಗಾರ್ಡ್‌ನ ತ್ವರಿತ ಕಾರ್ಯಾಚರಣೆಯಿಂದ ಮೀನುಗಾರನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಲಾಯಿತು.


