
ಮಾಜಿ ಮುಖ್ಯಮಂತ್ರಿ ವಿರುದ್ಧದ ಸ್ಟಿಂಗ್ ಆಪರೇಷನ್ ತನಿಖೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ತಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಯಾರೀ ಪೊಲೀಸ್ ಕಮಿಷನರ್? ಅವರು ಪೊಲೀಸ್ ಕಮಿಷನರಾ ಅಥವಾ ಹೆಡ್ ಕ್ಲರ್ಕ್ಗಿಂತಲೂ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರಾ? ಯಾರ ಹಂಗಿನಲ್ಲಿ ಕೆಲಸ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇದೆ. ಆಯುಕ್ತರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ ಎಂಬುದೂ ತಿಳಿದಿದೆ. ಸ್ಟಿಂಗ್ ಆಪರೇಷನ್ ತನಿಖೆ ಯಾವ ಹಂತದಲ್ಲಿದೆ ಮತ್ತು ಅದು ಯಾರಿಗೆ ತಿರುಗುಬಾಣವಾಗಲಿದೆ ಎಂಬುದನ್ನು ಸೋಮವಾರ ವಿವರಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಈ ಕುಮಾರಸ್ವಾಮಿಯನ್ನು ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸುಲಭವಾಗಿ ಮುಟ್ಟಲು ಸಾಧ್ಯವಿಲ್ಲ. ನನ್ನನ್ನು ಎದುರಿಸುವುದು ಅಷ್ಟು ಸುಲಭವಲ್ಲ” ಎಂದು ಎಚ್ಚರಿಕೆ ನೀಡಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ‘ಟ್ರೈಲರ್’ ಹೇಳಿಕೆಗೂ ತಿರುಗೇಟು ನೀಡಿದ ಕುಮಾರಸ್ವಾಮಿ, “ಇದೆಲ್ಲ ಯಾವ ಟ್ರೈಲರ್? ನಾನು ಸಿನಿಮಾ ಮಾಡಿದವನು. ಇವರು ಈಗ ಸಿನಿಮಾ ಮಾಡಲು ಶುರು ಮಾಡಿದ್ದಾರೆ. ಇವರ ಸಿನಿಮಾದ ಬಗ್ಗೆ ನಾಳೆ ವಿವರವಾಗಿ ಹೇಳುತ್ತೇನೆ” ಎಂದು ಹೇಳಿದರು.


