Sunday, November 1, 2026
Homeಕರಾವಳಿಕಂಟೇನರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

ಕಂಟೇನರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್‌ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ 60 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ 9.30ರ ಸುಮಾರಿಗೆ ಭಟ್ಕಳದ ಉಸ್ಮಾನ್ ನಗರದ ಎರಡನೇ ಕ್ರಾಸ್ ಸಮೀಪ ನಡೆದಿದೆ.

ಮೃತರನ್ನು ಗುಳ್ಮಿ ನಿವಾಸಿ, ವೃತ್ತಿಯಲ್ಲಿ ಟೈಲರ್ ಆಗಿದ್ದ ಮೊಹಮ್ಮದ್ ಖಾಸಿಂ (60) ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಹಳೆ ಬಸ್ ನಿಲ್ದಾಣದ ಸಮೀಪದ ತಮ್ಮ ಟೈಲರಿಂಗ್ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕಿದ್ವಾಯಿ ರಸ್ತೆಯಿಂದ ಗುಳ್ಮಿ ಕಡೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ, ಮಂಗಳೂರಿನಿಂದ ಹೊನ್ನಾವರದತ್ತ ಸಾಗುತ್ತಿದ್ದ ಕಂಟೇನರ್ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಖಾಸಿಂ ಅವರು ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ಕಂಟೇನರ್ ಸ್ಕೂಟರ್‌ ಅನ್ನು ಕೆಲ ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಕಂಟೇನರ್‌ನ ಚಕ್ರದಡಿ ಸಿಲುಕಿದ ಖಾಸಿಂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಕಾನೂನು ಪ್ರಕ್ರಿಯೆಗಳ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!