Friday, May 17, 2024
Homeತಾಜಾ ಸುದ್ದಿರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಎಸಿ ಕಾರ್, ಗನ್ ಮ್ಯಾನ್ ಕೊಡುವ ಬದಲು ರೈತರಿಗೆ ಕೊಡಲಿ-ಕೇಮಾರು ...

ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಎಸಿ ಕಾರ್, ಗನ್ ಮ್ಯಾನ್ ಕೊಡುವ ಬದಲು ರೈತರಿಗೆ ಕೊಡಲಿ-ಕೇಮಾರು ಶ್ರೀ

spot_img
- Advertisement -
- Advertisement -

ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ-2022 ಇದರ ಎರಡನೇ ದಿನ ಶನಿವಾರ ಸಂಜೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಆಶೀರ್ವಚನದ ಮಾತಾನ್ನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಅವರು, “ನಾವು ಸಾಧ್ಯವಾದರೆ ಒಬ್ಬರ ದುಃಖವನ್ನು ಕಮ್ಮಿ ಮಾಡಬೇಕು. ಯಾರ ಖುಷಿಯನ್ನೂ ಕಿತ್ತುಕೊಳ್ಳಬಾರದು. ನಾವು ಐಟಿ ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದೇವೆ. ಆದರೆ ಅದರಿಂದ ಹೊಟ್ಟೆ ತುಂಬಿಸಲಾಗುವುದಿಲ್ಲ. ನಮ್ಮ ಹೊಟ್ಟೆ ತುಂಬಿಸಬೇಕಾದರೆ ಒಂದು ಹಿಡಿ ಅನ್ನ ಬೇಕು. ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಕಾರ್, ಗನ್ ಮ್ಯಾನ್, ಎಸ್ಕಾರ್ಟ್ ಅನ್ನು ನಮ್ಮ ದೇಶದಲ್ಲಿ ನೀಡಲಾಗುತ್ತದೆ. ಅದರ ಬದಲು ದೇಶದ ರೈತರಿಗೆ ಅಂತಹ ಸವಲತ್ತು ನೀಡುವಂತಾಗಬೇಕು. ಇಂದಿನ ಪೀಳಿಗೆಯ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ ಏನೆಂಬುದೇ ಗೊತ್ತಿಲ್ಲ. ನಮ್ಮ ಮಕ್ಕಳಿಗೆ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ರೋಲ್ ಮಾಡೆಲ್ ಗಳಾಗಿದ್ದಾರೆ. ಅದರ ಬದಲು ರೈತರು ರೋಲ್ ಮಾಡೆಲ್ ಆಗಬೇಕು. ಕೃಷಿ ಮೇಳದಂತಹ ಕಾರ್ಯಕ್ರಮ ಅಲ್ಲಲ್ಲಿ ನಡೆಯಲಿ. ಇದು ಯುವಮನಸ್ಸುಗಳಿಗೆ ಪ್ರೇರಣೆಯಾಗಲಿ. ಕೃಷಿ ಮೇಳ ಮುಗಿದ ಬಳಿಕವೂ ಜನರ ಮನಸ್ಸಿನಲ್ಲಿ ಮೇಳದ ಉದ್ದೇಶ ಅಳಿಯದೆ ಉಳಿದಿರಲಿ. ಈ ಮೂಲಕ ನಾಡಿನಲ್ಲಿ ಕೃಷಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿ” ಎಂದು ಆಶಯ ವ್ಯಕ್ತಪಡಿಸಿದರು.

ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು, “ಹಿಂದೆ ಜೈ ಜವಾನ್ ಜೈ ಕಿಸಾನ್ ಎಂಬ ಮಾತಿತ್ತು. ಆದರೆ ಇಂದು ದೇಶದ ರೈತರ ಬೆನ್ನೆಲುಬು ಮುರಿದುಹೋಗಿದೆ. ಭತ್ತ ಬೆಳೆಯಲು ಬ್ಯಾಂಕ್ ಗಳು ಲೋನ್ ಕೊಡುತ್ತಿಲ್ಲ. ಇದಕ್ಕೆ ಕಾರಣ ಭತ್ತ ಬೆಳೆಯಿಂದ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಸರಕಾರ ಸಮಯಕ್ಕೆ ಸರಿಯಾಗಿ ಬೆಂಬಲ ಬೆಲೆ ನೀಡುತ್ತಿಲ್ಲ. ಇದರಿಂದ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದರ ಬಗ್ಗೆ ಸರಕಾರಗಳು ಗಮನ ಕೊಡಬೇಕು. ಕುಂದಾಪುರದಲ್ಲಿ ಹಿಂದೆ ರಬ್ಬರ್, ಭತ್ತ, ನೆಲಕಡಲೆ ಬೆಳೆಯುತ್ತಿದ್ರು ಆದರೆ ಈಗ ಅಲ್ಲಿ ಕೃಷಿ ನಡೆಯುತ್ತಿಲ್ಲ. ಈಗ ಎಲ್ಲಿ ನೋಡಿದರೂ ಲಾಭ ಗಳಿಸುವ ಉದ್ದೇಶದಿಂದ ಅಡಿಕೆ ಬೆಳೆಸುತ್ತಿದ್ದಾರೆ. ಕೃಷಿಗೆ ಪ್ರೋತ್ಸಾಹ ನೀಡುವ ಕೆಲಸ ಎಲ್ಲಾ ಕಡೆ ನಡೆದಲ್ಲಿ ದೇಶದಲ್ಲಿ ಕೃಷಿಕರು ನೆಮ್ಮದಿಯಿಂದ ಇರಬಹುದು. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಕೃಷಿ ಮೇಳದಿಂದ ಕೃಷಿಕರಿಗೆ ಇನ್ನಷ್ಟು ಹೆಚ್ಚಿನ ಉತ್ತೇಜನ ಸಿಗಲಿ. ಯುವಕರು ಕೃಷಿಯತ್ತ ಆಕರ್ಷಣೆ ಬೆಳೆಸಿಕೊಳ್ಳಲಿ” ಎಂದರು.

ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಕೃಷಿ ಆವಿಷ್ಕಾರದಲ್ಲಿ ಸಾಧನೆ ಮಾಡಿರುವ ಗಣಪತಿ ಭಟ್ ಎಸ್. ಕೆ. ಬಂಟ್ವಾಳ, ಜೇನು ಕೃಷಿಯಲ್ಲಿ ಸುಧಾಕರ್ ಪೂಜಾರಿ ಕೇಪು, ಕೃಷಿ ಆವಿಷ್ಕಾರದಲ್ಲಿ ಚಂದ್ರಶೇಖರ ಆಚಾರ್ಯ ಕೋಟೇಶ್ವರ, ಹೈನುಗಾರಿಕೆಯಲ್ಲಿ ಹರಿಕೃಷ್ಣ ತೋಡಿನ್ನಾಯ ಕಿನ್ನಿಗೋಳಿ, ಕೃಷಿ ಆವಿಷ್ಕಾರದಲ್ಲಿ ಸಾಧನೆ ಮಾಡಿರುವ ಕಾಳಪ್ಪ ಪಿರಿಯಾಪಟ್ಟಣ ಅವರನ್ನು ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ, ಇಸ್ಕಾನ್ ಮಂಗಳೂರಿನ ಸನಂದನಾ ದಾಸ್, ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೇಮಾರು ಈಶ ವಿಠಲದಾಸ ಸ್ವಾಮೀಜಿ, ಮೂಲ್ಕಿ ಸೀಮೆ ಅರಮನೆಯ ದುಗ್ಗಣ್ಣ ಸಾವಂತರು, ಡಾ. ನಿಟ್ಟೆ ವಿಶ್ವವಿದ್ಯಾನಿಲಯ ಅಸೋಸಿಯೇಟ್ ಅಮರಶ್ರೀ ಅಮರನಾಥ್ ಶೆಟ್ಟಿ, ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ ನ ಉದ್ಯಮಿ ರಾಜೇಂದ್ರ ವಿ. ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಅತುಲ್ ಕುಡ್ವ, ರಾಘವೇಂದ್ರ ನೆಲ್ಲಿಕಟ್ಟೆ, ಮೂಲ್ಕಿ ಜೀವನ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್., ಜಗದೀಶ್ ಶೆಟ್ಟಿ ಐರೋಳಿ, ಸತೀಶ್ ಶೆಟ್ಟಿ ಕೊಟ್ರಪ್ಪಾಡಿ ಉಪಸ್ಥಿತರಿದ್ದರು. ಪ್ರಶಾಂತ್ ಪೈ ಕಾರ್ಯಕ್ರಮದ ಪ್ರಸ್ತಾವನೆ ಭಾಷಣ ಮಾಡಿದರು. ಅತಿಥಿಗಳನ್ನು ಪತ್ರಕರ್ತ ನರೇಂದ್ರ ಕೆರೆಕಾಡ್ ಸ್ವಾಗತಿಸಿದರು.

- Advertisement -
spot_img

Latest News

error: Content is protected !!