ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣವನ್ನು ಭಕ್ತಿ, ಶ್ರದ್ಧೆಗಳಿಂದ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ. ನಾಡಿನೆಲ್ಲೆಡೆ ರಾಮನವಮಿ ಹಬ್ಬವನ್ನು ಭಕ್ತರು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ರಾಮನವಮಿ ಹಬ್ಬವು ಪ್ರತಿವರ್ಷ ಚೈತ್ರ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಏಪ್ರಿಲ್ 2, ಗುರುವಾರ ಬೆಳಿಗ್ಗೆ 11:10 ರಿಂದ ಮಧ್ಯಾಹ್ನ 1: 38 ರವರೆಗೆ ರಾಮನವಮಿ ಆಚರಿಸಲು ಶುಭ ಮುಹೂರ್ತವಿದೆ.
ಹಬ್ಬದ ಆಚರಣೆ ಹೇಗೆ?
ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ.
ರಾಮ ಮನೆದೇವರು ಇರುವವರು ಹಬ್ಬವನ್ನು 9 ದಿನಗಳ ಕಾಲ ಆಚರಣೆ ಮಾಡುತ್ತಾರೆ. ರಾಮನವಮಿ ಆಚರಣೆ ಅತ್ಯಂತ ಸರಳವಾಗಿದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಖ, ರಾಮ ಪಂಚಾಯತನದ ಫೋಟೋವನ್ನು ಇಟ್ಟು ಪೂಜೆ ಮಾಡುತ್ತಾರೆ, ಇದರಲ್ಲಿ ಶ್ರೀರಾಮನ ಜೊತೆದೆ ಎಲ್ಲಾ ಸಹೋದರರು ಇರುತ್ತಾರೆ. ಶ್ರೀರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚಲಾಗುತ್ತದೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ರಾಮನಾಮ ಬರೆಯುವುದು. ರಾಮನಾಮ ಜಪಿಸಿದರೆ ರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ.