ಬೆಳ್ತಂಗಡಿ: ಮನೆಯೊಳಗಿನ ಜಗಳದಿಂದ ಹಿಡಿದು ದೇಶದೊಳಗಿನ ಎಲ್ಲಾ ಆಗುಹೋಗುಗಳಿಗೆ ಖಾಕಿಗಳು ಬೇಕೇ ಬೇಕು. ಹಾಗಾಗಿ ಖಾಕಿ ಅಂದರೆ ಪೋಲೀಸರಿಗೆ ಕಠಿಣ ಗುಣಗಳನ್ನ ಮೈಗೂಡಿಸಿಗೊಂಡಿರುವುದು ಅನಿವಾರ್ಯವಾಗಿರುತ್ತದೆ. ಆದರೆ, ಮಾನವೀಯತೆ ಮೇಲೈಸಿಕೊಂಡ ಆರಕ್ಷಕರು ಇದ್ದಾಗ ಸಮಾಜದಲ್ಲೊಂದು ಬದಲಾವಣೆ ಆಗೋದು ಖಂಡಿತ. ಇದಕ್ಕೊಂದು ಸಾಕ್ಷಾತ್ ಉದಾಹರಣೆ, ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಬೀಟ್ ಪೋಲೀಸ್ ಶ್ರೀ ಶಶಿಕುಮಾರ್.
ಮೂಲತ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾದ ಶ್ರೀ ಶಶಿಕುಮಾರ್ ಅವರು ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮಕ್ಕೆ ಬೀಟ್ ಪೋಲೀಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಗ್ರಾಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ, ಗ್ರಾಮದ ಜನರ ಪ್ರೀತಿಪಾತ್ರರಾಗಿರುವ ಇವರು ಕೊರೊನ ಮಹಾಮಾರಿಯ ವಿರುಧ್ಧದ ಸಮರದ ನಿಮಿತ್ತ ಲಾಕ್ಡೌನ್ ನಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದಾರೆ. ಕರ್ತವ್ಯನಿರತ ಗ್ರಾಮದ ಕಡುಬಡತನದಲ್ಲಿದ್ದ ಮೂರು ಮನೆಗಳಿಗೆ ತನ್ನ ವೈಯಕ್ತಿಕ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂಧಿಸುತ್ತಿರುವಾಗ ಗ್ರಾಮದಲ್ಲಿ ಈ ರೀತಿಯಾದ ಇನ್ನು ಹಲವಾರು ಕುಟುಂಬಗಳಿವೆ ಎಂದರಿತ ಶ್ರೀ ಶಶಿಕುಮಾರ್ ಅವರು ಗ್ರಾಮದ ಒಂದಷ್ಟು ದಾನಿಗಳನ್ನು ಸಂಪರ್ಕಿಸಿ, ತೀರಾ ಅಗತ್ಯವಿರುವ ಹದಿನೈದು ಕುಟುಂಬಗಳಿಗೆ ದಿನಸಿ ಸಾಮಾನು ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸತ್ಕಾರ್ಯದಲ್ಲಿ ಇವರೊಂದಿಗೆ ಶ್ರೀ ಲಿಜೋ ಸ್ಕರಿಯ ಹೇಡ್ಯ ,ಶ್ರೀ ಸುದರ್ಶನ್ ರಾವ್ ಗಜಂತೋಡಿ , ಶ್ರೀಮತಿ ಬೇಬಿ ಸದಾಶಿವ ಗೌಡ ಕುದುರು, ಶ್ರೀ ಹರಿಪ್ರಸಾದ್ ಭಟ್ ಹಿತ್ತಿಲಕೋಡಿ , ಶ್ರೀ ಶಂಕರ್ ಭಟ್ಬ ಬಸವದಡ್ಡು ಹಾಗೂ ಶ್ರೀ ಸೂರಜ್ ಅಡೂರು ಇವರುಗಳು ಸಹಕರಿಸಿದ್ದಾರೆ.