ಶಿವಮೊಗ್ಗ: ಹಾವು ಕಡಿದು ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಸುಳಗೋಡು ಗ್ರಾಮದಲ್ಲಿ ನಡೆದಿದೆ. ಸುಳಗೋಡು ಗ್ರಾಮದ ವೀರಭದ್ರ ಎಂಬುವವರ ಪತ್ನಿ ಸ್ವಾತಿ (26) ಮೃತ ದುರ್ದೈವಿ.
ಸ್ವಾತಿ ಶನಿವಾರ ಮಧ್ಯಾಹ್ನ ವೇಳೆಗೆ ತಮ್ಮ ಪತಿ ಹಾಗೂ ಇತರ ಕೂಲಿ ಕಾರ್ಮಿಕರೊಂದಿಗೆ ಶುಂಠಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಎಲ್ಲರೂ ಕೆಲಸದ ನಡುವೆ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವಿಶ್ರಾಂತಿ ಪಡೆಯುತ್ತಿದ್ದ ಸ್ವಾತಿ ಅವರ ಬಲಗಾಲಿನ ಮೊಣಕಾಲಿಗೆ ವಿಷಪೂರಿತ ಹಾವು ಕಚ್ಚಿದೆ.
ಹಾವು ಕಚ್ಚಿದ ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಮಡಿಲಿಗೆ ಬರುವ ಮಗುವಿನ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


