ಬೆಂಗಳೂರು: ಈ ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡ ಚಿತ್ರ ರಂಗದ ಜನಪ್ರಿಯ ನಟಿ ಶುಭ ಪೂಂಜಾ ಈಗ ಹಳ್ಳಿ ಮನೆಯಲ್ಲಿ ಅವರ ಸಂಬಂಧಿಗಳ ಜೊತೆ ಬಂಧಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಉಡುಪಿ ಬಳಿಯ ಶಿರ್ವೆಯಲ್ಲಿ ಸುತ್ತಲೂ ಕಾಡಿದ್ದು, ಅದರ ಮಧ್ಯೆ ಒಂದು ಮನೆ. ಆ ಮನೆಯಲ್ಲಿ ಕೋವಿಡ್-19 ವೈರಸ್ನಿಂದ ಎಲ್ಲರೂ ಕಂಗಾಲಾಗಿರುವ ಸಮಯದಲ್ಲಿ ಶುಭ ಪೂಂಜಾ ಸಹ ಚಿಂತಿತರಾಗಿದ್ದಾರೆ.
ಆದರೆ ಅವರ ದಿನ ನಿತ್ಯದ ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆ ಸಹ ಆಗಿದೆ.ಶುಭ ಪೂಂಜಾ ಅವರ ಸೋದರ ಸಂಬಂಧಿಗಳ ಜೊತೆ ದೂರ ಕ್ರಮಿಸಿ ಕಟ್ಟಿಗೆ ಹೊತ್ತು ತರುತ್ತಾರೆ. ಇನ್ನು ಮನೆ ಬಳಕೆಗೆ ದಿವಸಕ್ಕೆ ಹತ್ತಾರು ಬಾರಿ ಕೊಡದಲ್ಲಿ ನೀರು ಸೇದಿ ತರುತ್ತಾರೆ. ಬಾವಿಯಲ್ಲಿ ನೀರು ಸೇದಿದರೆ ಕುಡಿಯಲು ನೀರು, ಅಡಿಗೆ ಮಾಡಲು ಮತ್ತು ಸ್ನಾನ ಮಾಡಲು ಸಾಧ್ಯ ಎಂದು ಶುಭ ಪೂಂಜಾ ಹೇಳಿಕೊಂಡಿದ್ದಾರೆ.
ಇನ್ನು ತೊಂದರೆ ಅಂದರೆ ಮನೆಯಲ್ಲಿ ವಿದ್ಯುತ್ ಇಲ್ಲದಿರುವುದು. ಅಡಿಗೆ ಮಾಡಿಕೊಳ್ಳಲು ಸಾಕಷ್ಟು ಸಾಮಗ್ರಿಗಳನ್ನು ಶುಭ ಪೂಂಜಾ ಮೊದಲೇ ತಂದು ಇಟ್ಟುಕೊಂಡಿದ್ದಾರೆ. ಅವರ ಮನೆಯ ಸುತ್ತ ಯಾರಾದರೂ ಹಸಿವಿನಿಂದ ಇದ್ದರೆ ಅವರಿಗೆ ಸಹ ಶುಭ ಪೂಂಜಾರ ಮನೆಯಿಂದಲೇ ಆಹಾರ ನೀಡಲಾಗುತ್ತಿದೆ.ಲಾಕ್ ಡೌನ್ ಅಲ್ಲ ಒಂದು ರೀತಿಯಲ್ಲಿ ಸೀಲ್ ಡೌನ್ ಆಗಿಯೇ ಇದೆ ಜೀವನ ಎನ್ನುತ್ತಾರೆ ಶುಭ ಪೂಂಜಾ.
ಸಧ್ಯಕ್ಕೆ ಯಾವ ಸಿನಿಮಾ ಒಪ್ಪಿಕೊಂಡಿಲ್ಲ. ಶುಭ ಪೂಂಜಾ ಅಭಿನಯದ ನರಗುಂದ ಭಂಡಾಯ ಬಿಡುಗಡೆ ಆದ ದಿವಸ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಮಾರ್ಚ್ 14 ರಿಂದ ಲಾಕ್ ಡೌನ್ ಆಗಿದ್ದು, ಆ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂದರು. ಮತ್ತೊಂದು ಥ್ರಿಲ್ಲರ್ ಕಥಾ ವಸ್ತು ಸಿನಿಮಾ ರೈಮ್ಸ್ ನಲ್ಲಿ ಶುಭ ಪೂಂಜಾ ಅಭಿನಯ ಮಾಡಿದ್ದಾರೆ.