ಹಾವೇರಿ :ಕೆಜಿಎಪ್-2 ಚಲನಚಿತ್ರ ವೀಕ್ಷಣೆ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಪೇಕ್ಷಕನೋರ್ವನ ಮೇಲೆ ಗುಂಡಿನ ದಾಳಿ ನಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದು, ಗುಂಡು ತಗುಲಿದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಬೆರಳುಚ್ಚು ತಜ್ಞರು, ಶ್ವಾನ ದಳ ಹಾಗೂ ಪರಿಶೀಲನೆ ತಂಡ ಆಗಮಿಸಲಿದ್ದು, ಪಂಚನಾಮೆ ಆಗುವವರೆಗೂ ಥಿಯೇಟರ್ ಬಂದ್ ಮಾಡಲಾಗಿದೆ.
ಸಿನಿಮಾ ನೋಡುವಾಗ ಸೀಟ್ ಮೇಲೆ ಕಾಲು ಇಟ್ಟುಕೊಂಡು ಕುಳಿತಾಗ ಯುವಕರಿಬ್ಬರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಪಕ್ಕದಲ್ಲಿದ್ದ ವ್ಯಕ್ತಿಯು ತನ್ನ ರಿವಾಲ್ವಾರ್ನಿಂದ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ್ ಶಿವಪೂರ(28) ಎಂಬಾತನ ಮೇಲೆ 3 ಸುತ್ತಿನ ಗುಂಡು ಹಾರಿ ಪರಾರಿಯಾಗಿದ್ದಾನೆ. 2 ಗುಂಡು ಮಿಸ್ ಫೈರ್ ಆಗಿದ್ದು, ಒಂದು ಗುಂಡು ವಸಂತಕುಮಾರ್ನ ಹೊಟ್ಟೆಗೆ ಗುಂಡು ಹೊಕ್ಕಿದ್ದು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್ ಘಟನೆ ಬಗ್ಗೆ ವಿವರಿಸಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿದ್ದ 2 ಖಾಲಿ ಕೋಕಾಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಎರಡು ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಮಾಡುತ್ತೇವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.