ಬಾಗಲಕೋಟೆ: ಪೆನ್ ಡ್ರೈವ್ ವೀಡಿಯೋ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಪ್ರಜ್ವಲ್ ರೇವಣ್ಣ ನನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇಂದು ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ಚುನಾವಣಾ ಪೂರ್ವವಾಗಿ ಹೊಂದಾಣಿಕೆ ಮಾಡಿಕೊಂಡಿದ್ದು ಇಂತಹ ಕೇಸ್ ಇದೆ ಅಂತ ನಮ್ಮ ನಾಯಕರಿಗೆ ಗೊತ್ತಿರಲಿಲ್ಲ ಎಂದು ಪ್ರಜ್ವಲ್ ನನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿರುವ ಶೋಭಾ ಕರಂದ್ಲಾಜೆ,ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಏನೇ ಕ್ರಮ ತೆಗೆದುಕೊಂಡರೂ ಬಿಜೆಪಿ ಮಧ್ಯೆ ಬರುವುದಿಲ್ಲ ಎಂದಿದ್ದಾರೆ.
ಅಲ್ಲದೇ, ಅನಾವಶ್ಯಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ಶೋಭಾ ಕರಂದ್ಲಾಜೆ ಅರೋಪಿಸಿದ್ದಾರೆ.
ಜಮಖಂಡಿಯಲ್ಲಿ ಇಂದು ಶೋಭಾ ಕರಂದ್ಲಾಜೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.