ಮುಂಬೈ: ರಾಜ್ಯಕ್ಕೆ ವಾಪಸ್ಸಾಗುವ ವಲಸೆ ಕಾರ್ಮಿಕರು ರಾಜ್ಯ ಪ್ರವೇಶಿಸುವುದಕ್ಕೂ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ಉತ್ತರಪ್ರದೇಶ ಸರ್ಕಾರದ ಆದೇಶಕ್ಕೆ ಶಿವಸೇನೆ ತೀವ್ರವಾಗಿ ಕಿಡಿಕಾರಿದ್ದು, ಇದು ಅಮಾನವೀಯ ನಡೆ ಎಂದು ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿದೆ.
ಉತ್ತರಪ್ರದೇಶ ಸರ್ಕಾರದ ಆದೇಶ ಕ್ರೂರ ಹಾಗೂ ಅಮಾನವೀಯವಾದದ್ದು. ಅಲ್ಲಿನ ಸರ್ಕಾರ ಬಡವರಿಗೊಂಡು, ಶ್ರೀಮಂತರಿಗೊಂದು ನಿಯಮವನ್ನು ಮಾಡುತ್ತಿದೆ. ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ನೂರಾರು ಬಸ್ಸುಗಳನ್ನು ಕಳುಹಿಸಿಕೊಟ್ಟಿತ್ತು. ಈ ವೇಳೆ ಯಾರನ್ನೂ ಪರೀಕ್ಷೆಗೊಳಪಡಿಸಲಿಲ್ಲ. ಆದರೆ, ಬಡವರಿಗೆ ಪ್ರಯಾಣ ಬೆಳೆಸಲು ರೈಲುಗಳ ಟಿಕೆಟ್ ದರಗಳನ್ನ ಏರಿಕೆ ಮಾಡಲಾಗುತ್ತಿದೆ. ಜೊತೆಗೆ ಪರೀಕ್ಷೆ ನಡೆಸಿ ಒಳ ಕರೆಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದೆ.
ನಿನ್ನೆಯವರೆಗೂ ವಲಸೆ ಕಾರ್ಮಿಕರು ರಾಜಕೀಯ ಪಕ್ಷಗಳಿಗೆ ವೋಟ್ ಬ್ಯಾಂಕ್ ಆಗಿದ್ದರು, ಆದರೆ ಈಗ ಅವರನ್ನು ದೂರ ಇಡಲಾಗುತ್ತಿದೆ. ವಲಸಿಗರೇನು ನಾಯಿ, ಬೆಕ್ಕುಗಳಲ್ಲ. ಆದರೆ, ಅವರ ತವರಿನ ರಾಜ್ಯಗಳು ಮಾನವೀಯತೆಯನ್ನೇ ತೋರಿಸುತ್ತಿಲ್ಲ ಎಂದು ತಿಳಿಸಿದೆ.