
ಬೆಳ್ತಂಗಡಿ: ಸವಣಾಲು ಮಂಜದಬೆಟ್ಟು ಪಿಲ್ಚಂಡಿ ಗುಡ್ಡೆಯ ಶ್ರೀ ಪಿಲಿಚಾಮುಂಡಿ ಕೊಡಮಣಿತ್ತಾಯ ದೈವಗಳ ಶಿಲಾಮಯ ನೂತನ ದೈವಸ್ಥಾನದಲ್ಲಿ 2026ರ ಆಗಸ್ಟ್ 04ರಂದು ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆಯು ಶಾಸ್ತ್ರೋಕ್ತವಾಗಿ ಬಹಳ ವಿಜೃಂಭಣೆಯಿಂದ ನಡೆಯಿತು.
ಧರ್ಮ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವವು ಕಳೆದ ಮಾರ್ಚ್ 5 ಮತ್ತು 6 ರಂದು ನೆರವೇರಿದ್ದು, ಆ ಸಂದರ್ಭದಲ್ಲಿ ದೈವ ನೀಡಿದ ಅಭಯ ನುಡಿಯಂತೆ, ದೈವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆಯನ್ನು ನೆರವೇರಿಸಬೇಕೆಂದು ಅಪ್ಪಣೆಯಾಗಿತ್ತು. ದೈವದ ನುಡಿಯಂತೆ ಈ ಪ್ರಾಯಶ್ಚಿತ್ತ ಸೇವೆಗಳು 2026ರ ಆಗಸ್ಟ್ 04ರಂದು ಶ್ರೀ ಪಿಲಿಚಾಮುಂಡಿ ದೈವಸ್ಥಾನದಲ್ಲಿ ನಡ್ವಂತ್ತಾಡಿ ಬ್ರಹ್ಮಶ್ರೀ ತಂತ್ರಿಗಳಾದ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಹಾಗೂ ಶ್ರೀ ವಿಷ್ಣುಮೂರ್ತಿ ಮಂಜಿತ್ತಾಯರವರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಗುತ್ತು ಬರ್ಕೆಯವರು ಹಾಗೂ ಊರ ಪರವೂರ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


