ಬೆಂಗಳೂರು; ಹಿರಿಯ ಪತ್ರಕರ್ತ ಸುದ್ದಿ ಟಿವಿ ಖ್ಯಾತಿಯ ಶಶಿಧರ್ ಭಟ್ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಆರ್ಥಿಕ ಸಂಕಷ್ಟ ಸಿಲುಕಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಪೋಸ್ಟ್ ನೋಡಿ ಸಾಕಷ್ಟು ಮಂದಿ ಹಿರಿಯ ಪತ್ರಕರ್ತನಿಗೆ ಈ ರೀತಿ ಸ್ಥಿತಿ ಬರಬಾರದಿತ್ತು ಅಂತಾ ಬೇಸರ ಹೊರ ಹಾಕಿದ್ದರು.ಅಲ್ಲದೇ ಸರ್ಕಾರ ಸಹಾಯ ಹಸ್ತ ಚಾಚಬೇಕು ಎಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಸಿಎಂ ಇದೀಗ ಅವರ ನೆರವಿಗೆ ನಿಂತಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ್ ಭಟ್ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ. ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಮುತುವರ್ಜಿಯಿಂದ ಅವರ ಆರೈಕೆ ಮಾಡುವಂತೆ ತಿಳಿಸಿದ್ದೇನೆ. ಸಮಾಜದ ಒಳಿತಿಗಾಗಿ ನಿರ್ಭೀತ ಧ್ವನಿಯಾಗಿದ್ದ ಶಶಿಧರ್ ಭಟ್ಟರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.