ಮಂಗಳೂರು: ತ್ರಿಕೋನ ಪ್ರೇಮ ಕಥೆ ಹೊಂದಿರುವ ಸಿನಿಮಾ ದಿಯಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಭಿನ್ನವಾದ ನಿರೂಪಣೆಯಿಂದಾಗಿ ಜನಪ್ರಿಯವಾಗಿದ್ದ ಸಿನಿಮಾ ಇದಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಪೃಥ್ವಿ ಅಂಬರ್, ಖುಷಿ ರವಿ, ದೀಕ್ಷಿತ್ ಶೆಟ್ಟಿ ನಟಿಸಿದ್ದರು.

ಇದೀಗ ಈ ಜೋಡಿಯಿಂದ ಮತ್ತೊಂದು ಸಿನಿಮಾ ಹೊರಬರುತ್ತಿದ್ದು, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಈ ಹೊಸ ಸಿನಿಮಾದ ಸ್ಕ್ರಿಪ್ಟ್ ಬರೆದಿದ್ದಾರೆ. ಚಿತ್ರಕ್ಕೆ ನಿರ್ದೇಶಕರಾಗಿ ದಿಯಾ ಸಿನಿಮಾದ ಸಹಾಯಕ ನಿರ್ದೇಶಕರಾಗಿದ್ದ ದರ್ಶನ್ ಅಪೂರ್ವ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಜೋಡಿಯಾಗಿ ಪೃಥ್ವಿ ಅಂಬರ್ ಹಾಗೂ ಖುಷಿ ರವಿ ಕಾಣಿಸಿಕೊಳ್ಳುತ್ತಿದ್ದು ಸಿನಿರಸಿಕರ ಬಹುದಿನಗಳ ಕನಸು ಈಡೇರಿದಂತಾಗಿದೆ.

ಪೃಥ್ವಿ ಅಂಬರ್ ಹಾಗೂ ಖುಷಿ ರವಿ ಒಂದಾಗಿ ಸಿನಿಮಾ ಮಾಡುತ್ತಾರೆ ಎಂದ ತಕ್ಷಣ ಇದು ದಿಯಾ ಪಾರ್ಟ್ 2 ಇರಬಹುದೇ ಎಂಬ ಅನುಮಾನ ಮೂಡುವುದು ಸಹಜ . ಆದರೆ ಇದು ಸಂಪೂರ್ಣವಾಗಿ ಬೇರೆ ತರಹದ ಸಿನಿಮಾ ಆಗಿರಲಿದೆ. ದಿಯಾ ಸಿನಿಮಾದಲ್ಲಿ ಪೃಥ್ವಿ ಹಾಗೂ ಖುಷಿ ಒಂದಾಗದೆ ಇದ್ದಿದ್ದರಿಂದ ಪ್ರೇಕ್ಷಕರಿಗೆ ನಿರಾಸೆ ಮೂಡಿತ್ತು. ಆದರೆ ಈ ಸಿನಿಮಾದಲ್ಲಿ ಇಬ್ಬರನ್ನು ಒಟ್ಟಾಗಿ ನೋಡುವಂತಹ ಅವಕಾಶವನ್ನು ಕೊಡುತ್ತಿದ್ದೇವೆ ಎಂದು ಪೃಥ್ವಿ ಹೇಳುತ್ತಾರೆ.

ಈ ಚಿತ್ರಕ್ಕೆ ಪರ್ಪೆಚುವಲ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಎಂಬ ಹೊಸ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ. ಈ ಸಂಸ್ಥೆಯನ್ನು ದುಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಉದ್ಯಮಿಗಳಿಂದ ನಡೆಸಲ್ಪಡುತ್ತಿದೆ ಎಂದು ಹೇಳಲಾಗಿದೆ.ಇನ್ನು ಚಿತ್ರದ ಬಹುತೇಕ ಶೂಟಿಂಗ್ ಕಾಪು ಹಾಗೂ ಕುಂದಾಪುರದಲ್ಲಿರಲಿದೆ ಎಂದು ತಿಳಿದು ಬಂದಿದೆ.
ಚಿತ್ರದ ಕಥೆ ಕಾಪು ಹಿನ್ನಲೆಯಲ್ಲಿ ನಡೆಯಲಿದ್ದು, ಸಂಭಾಷಣೆಗಳು ಉಡುಪಿ ಕನ್ನಡದ ಶೈಲಿಯಲ್ಲಿರಲಿದೆ. ಥ್ರಿಲ್ಲರ್ ಅಂಶವನ್ನು ಒಳನಗೊಂಡ ಪ್ರೇಮಕಥೆ ಇದಾಗಿದ್ದು,ಸಿನಿಮಾದ ಟೈಟಲ್ ಬಗ್ಗೆ ಇನ್ನು ಅಂತಿಮವಾಗಿಲ್ಲ.


