ಕಾಸರಗೋಡು: ಕಾಸರಗೋಡಿನ ಪುಳಿಯನೂರು ಸರಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಜಾನಕಿ (65) ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಸಜೆ ಹಾಗೂ 1. 25 ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕೃತ್ಯದ ಪ್ರಥಮ ಆರೋಪಿ ಪುಲಿಯನ್ನೂರು ಚಿರಿಕುಳದ ವಿಶಾಖ್(27) ಮತ್ತು ಮೂರನೇ ಆರೋಪಿ ಅರುಣ್(30) ಎಂದು ಗುರುತಿಸಲಾಗಿದ್ದು, ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಎರಡನೇ ಆರೋಪಿಯಾಗಿದ್ದ ರಿನಿಷ್(28) ವಿರುದ್ದದ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ. ದಂಡ ಮೊತ್ತವನ್ನು ಜಾನಕಿರವರ ಕುಟುಂಬಕ್ಕೆ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
2017 ರ ಡಿಸಂಬರ್ 13 ರಂದು ರಾತ್ರಿ ಮುಸುಕುಧಾರಿಗಳಾಗಿ ಕಳ್ಳತನ ಮಾಡಲು ಮನೆಗೆ ನುಗ್ಗಿದ ತಂಡವು ಜಾನಕಿಯ ಅವರ ಕತ್ತು ಕೊಯ್ದು ಕೊಲೆಮಾಡಿದ್ದರು. ಬೊಬ್ಬೆ ಕೇಳಿ ಓಡಿ ಬಂದ ಪತಿ ಕೃಷ್ಣ ಅವರನ್ನು ಮಾರಾಕಾಸ್ತ್ರದಿಂದ ಕಡಿದು ಗಾಯಗೊಳಿಸಿದ್ದರು.
ಆರೋಪಿಗಳಿಬ್ಬರು ಜಾನಕಿ ಟೀಚರ್ ಅವರ ಶಿಷ್ಯರಾಗಿದ್ದರು. ಜಾನಕಿ ಟೀಚರ್ ಅವರ ಶಾಲೆಯಲ್ಲಿ ಕಲಿತಿದ್ದು, ಇದರಿಂದ ಜಾನಕಿ ಟೀಚರ್ ಗುರುತು ಪತ್ತೆ ಹಚ್ಚಿದ್ದು, ಇದರಿಂದ ಭಯಗೊಂಡು ಜಾನಕಿ ಟೀಚರ್ ಅವರನ್ನು ಕೊಲೆಗೈದಿದ್ದಾರೆ ಎಂದು ವಿಚಾರಣೆಯ ವೇಳೆಗೆ ಬಾಯ್ಬಿಟ್ಟಿದ್ದರು.
ಆರೋಪಿಗಳು ಕಳವುಗೈದ ಚಿನ್ನಾಭರಣವನ್ನು ಪಯ್ಯನ್ನೂರು, ಕಣ್ಣೂರು, ಮಂಗಳೂರು ಮೊದಲೆಡೆಗಳಲ್ಲಿ ಮಾರಾಟಮಾಡಿದ್ದರು. ಪ್ರಾಸಿಕ್ಯೂಷನ್ ಪರ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ . ದಿನೇಶ್ ಕುಮಾರ್ ಹಾಜರಾದರು. ಜಾನಕಿ ಟೀಚರ್ ದುಡಿದು ನಿವೃತ್ತರಾಗಿದ್ದರು.


