ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ಥರ ಪುನರ್ವಸತಿಯನ್ನು ಮುಳಿಯಾರುನಲ್ಲಿ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇರಳ ಸ್ಥಳೀಯಾಡಳಿತ ಸಚಿವ ಎಂ.ವಿ ಗೋವಿಂದನ್ ಮಾಸ್ಟರ್ ಹೇಳಿದರು.
ಅವರು ಸೋಮವಾರದಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಎಂಡೋಸಲ್ಫಾನ್ ಸಂತ್ರಸ್ತರ ಸೆಲ್ ಸಭೆಯಲ್ಲಿ ಈ ಕುರಿತು ಮಾತನಾಡಿದರು. ಪುನರ್ವಸತಿ ಗ್ರಾಮ ಯೋಜನೆಯು 25 ಎಕರೆ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿಯೂ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದರು.
ಇನ್ನೂ ಸುಪ್ರೀಂ ಕೋರ್ಟ್ ಆದೇಶದಂತೆ ಸಂತ್ರಸ್ಥರಿಗೆ ಶೀಘ್ರದಲ್ಲೇ ಧನಸಹಾಯ ವಿತರಣೆಯನ್ನು ಪೂರ್ಣಗೊಳಿಸಲಾಗುತ್ತದೆ. ಬಹುತೇಕ ಮಂದಿಗೆ ಜುಲೈ ಅಂತ್ಯದೊಳಗೆ ಧನಸಹಾಯ ವಿತರಣೆಯಾಗುವಂತೆ ಯೋಜನೆಯನ್ನು ಮಾಡಲಾಗುತ್ತದೆ. ಇದುವರೆಗೆ 1308 ಮಂದಿಗೆ 51.68ಕೋಟಿ ರೂ ಒದಗಿಸಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಬರುವ ತನಕ ಉಚಿತ ಪಡಿತರ, ಪಿಂಚಣಿ, ಶೈಕ್ಷಣಿಕ ಸೌಲಭ್ಯ ಹಾಗೂ ಸಾಲ ಮನ್ನಾ ಸೇರಿದಂತೆ 287,76,140,36 ರೂ. ನೀಡಲಾಗಿದೆ ಎಂದು ತಿಳಿಸಿದರು.
ಎಣ್ಮಕಜೆ, ಪುಲ್ಲೂರು ಗ್ರಾಮಗಳಲ್ಲಿ ಸಾಫಲ್ಯ ಯೋಜನೆಯಡಿ ಸಾಯಿ ಟ್ರಸ್ಟ್ ನಿರ್ಮಿಸಿದ ಮನೆಗಳಲ್ಲಿ ಪ್ರಸ್ತುತ ಉಳಿದಿರುವ 10 ಮನೆಗಳನ್ನು ಜೂನ್ 24 ರಂದು ಅದೃಷ್ಟ ಚೀಟಿ ಆಯ್ಕೆ ಮುಖೇನ ಸಂತ್ರಸ್ಥರಿಗೆ ಒದಗಿಸಲಾಗುವುದು ಎಂದರು. ಇದರನ್ವಯ ಮನೆ ಅಗತ್ಯ ಇರುವವರ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಲಾಗುತ್ತದೆ. ವಿದ್ಯುತ್ ಹಾಗೂ ರಸ್ತೆಯನ್ನು ಒದಗಿಸಲಾಗುತ್ತದೆ ಎಂದರು.
ಇನ್ನೂ ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಯಲ್ಲಿ ಹೆಸರಿದ್ದ ರೋಗಿಯ ಮನೆಯಲ್ಲಿ ಬೇರೆ ರೋಗಗ್ರಸ್ತರಿದ್ದರೆ ಆ ರೋಗಿಗೂ ಉಚಿತ ಚಿಕಿತ್ಸೆ ನೀಡಲು ವಿಶೇಷ ಚಿಕಿತ್ಸಾ ಮಂಡಳಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ರಾಜಗೋಪಾಲನ್ ಮತ್ತು ಇ. ಚಂದ್ರಶೇಖರನ್, ಸಿ.ಎಚ್.ಕುಂಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಸೆಲ್ ಅಪರ ಜಿಲ್ಲಾಧಿಕಾರಿ ಎಸ್. ಶಶಿಧರನ್ ಪಿಳ್ಳೆ, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಮಾಜಿ ಸಂಸದ ಪಿ ಕರುಣಾಕರನ್, ಮಾಜಿ ಶಾಸಕ ಕೆ.ಪಿ.ಕುಂಞಿಕಣ್ಣನ್ ಸೆಲ್ ಸದಸ್ಯರು ಸ್ಥಳೀಯ ಸ್ವಯಂ ಆಡಳಿತದ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಂಡೋಸಲ್ಫಾನ್ ವಿಪತ್ತು ಸಂತ್ರಸ್ತರ ಪ್ರತಿನಿಧಿಗಳು ಉಪಸ್ಥಿತರಿದ್ದರು.


