ಬೆಳ್ತಂಗಡಿ : “ನೋವಿನಲ್ಲಿ ನೀ ಒಬ್ಬಂಟಿಯಲ್ಲ , ಜೊತೆಗೆ ನಾವಿದ್ದೇವೆ” ಎಂಬ ಘೋಷಣೆಯೊಂದಿಗೆ ತಾಲೂಕಿನ ಮೂಲೆ ಮೂಲೆಗಳಲ್ಲಿರುವ ವಿವಿಧ ಕಾರಣಕ್ಕಾಗಿ ಹಾಸಿಗೆ ಹಿಡಿದಿರುವ ರೋಗಿಗಳನ್ನು ಭೇಟಿ ನೀಡಿ , ಅವರಿಗೆ ಆತ್ಮ ಸ್ಥೈರ್ಯ ಕೊಡುವ , ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ತಂಡ ಹಲವಾರು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ಫೆ.26 ರಂದು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ರಾಮಣ್ಣ ಗೌಡರ ಮನೆಗೆ ಭೇಟಿ ನೀಡಿತು.
ಈ ಮೊದಲು ಕೇರಳದಲ್ಲಿ ಮಾತ್ರ ನಡೆಯುತ್ತಿದ್ದ ಈ ಮಾನವೀಯ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿಗೆ ಮೊದಲು ಪರಿಚಯಿಸಿದವರು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾಗಿರುವ ದ.ಕ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ , ಸಂಶೋಧನಾ ಕೇಂದ್ರದ ಅಧ್ಯಕ್ಷ ಹರಿದಾಸ್ ಎಸ್.ಎಂ ರವರು. ತಾಲೂಕಿನ 100 ಕ್ಕೂ ಹೆಚ್ಚು ಹಾಸಿಗೆಯಲ್ಲಿ ಮಲಗಿಕೊಂಡಿರುವ ರೋಗಿಗಳ ಮನೆಗೆ ವೈದ್ಯಕೀಯ ಚಿಕಿತ್ಸಕರು ಸೇರಿದಂತೆ ಕಲಾವಿದರ ಜೊತೆಗೆ ಭೇಟಿ ನೀಡಿ ರೋಗಿಗಳು , ಮನೆಯವರ ಜೊತೆಗೆ ಮಾತುಕತೆ ನಡೆಸಿ ನಂತರ ಒಂದಷ್ಟು ಕಾಲ ಕಲಾವಿದರು ಹಾಡುಗಳ ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಮುದ ನೀಡುತ್ತಾರೆ. ಜೊತೆಗೆ ಪ್ರಾಥಮಿಕ ಚಿಕಿತ್ಸೆಗಳನ್ನು ನೀಡುವುದೇ ಈ ಮಾನವೀಯ ಕಾರ್ಯಕ್ರಮದ ಉದ್ದೇಶ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ರಾಮಣ್ಣ ಗೌಡ ಸುಮಾರು 26 ವರ್ಷಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವಾಗ ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿ ಎದ್ದು ನಡೆಯಲಾರದ ಸ್ಥಿತಿಯಲ್ಲಿ ಇಂದಿನವರೆಗೂ ಹಾಸಿಗೆಯಲ್ಲಿ ಮಲಗಿಕೊಂಡೆ ಜೀವನ ನಡೆಸುತ್ತಿದ್ದಾರೆ . ಗುರುವಾರ ಬೆಳ್ತಂಗಡಿ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಹರಿದಾಸ್ ಎಸ್.ಎಮ್ ರವರ ತಂಡ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.
ರಾಮಣ್ಣ ಗೌಡರ ಜೊತೆ ಸುಮಾರು ಒಂದು ಗಂಟೆ ಸಮಯ ಮೀಸಲಿಟ್ಟು ಮಾತುಕತೆ ನಡೆಸಲಾಯಿತು. ರಾಮಣ್ಣ ಗೌಡರು ಮಾತನಾಡುತ್ತಾ ಅಗತ್ಯ ಖರ್ಚು ವೆಚ್ಚಗಳಿಗೆ ಸರಕಾರ ಈಗ ನೀಡುತ್ತಿರುವ ವೇತನ ಹಣ ಸಾಕಾಗುತ್ತಿಲ್ಲ ಎಂದು ತನ್ನ ನೋವನ್ನು ಹಂಚಿಕೊಂಡರು. ದಿನನಿತ್ಯದ ಖರ್ಚು, ಔಷಧಿ ಖರ್ಚು, ಸರಕಾರಿ ಆಸ್ಪತ್ರೆಗೆ ಹೋಗಿ ಔಷದಿ ತರಲು ಸಾದ್ಯವಾಗುತ್ತಿಲ್ಲ ಹಾಗಾಗಿ ಹೊರಗಿನಿಂದ ಔಷಧಿ ತರಬೇಕು. ವಾಟರ್ ಪ್ರೂಫ್ ಹಾಸಿಗೆ , ಹಳೆಮನೆ ರಿಪೇರಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯನ್ನು ಹಂಚಿಕೊಂಡರು. ತಾಲೂಕಿನಲ್ಲಿರುವ ಸಮಾಜಸೇವಾ ಸಂಘಟನೆಗಳು , ಜಾತಿ ಸಂಘಟನೆಗಳು ನಮ್ಮಂತಹ ಬಡವರ ಬಗ್ಗೆ ಕಾಳಜಿ ವಹಿಸಿದರೆ ನಾವೂ ಇತರರಂತೆ ಕಷ್ಟದಲ್ಲಿಯೂ ಜೀವನ ನಡೆಸಬಹುದು ಎಂದು ನೋವಿನಿಂದ ಹೇಳಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ ಜೊತೆಗೆ ನಿರ್ದೇಶಕರಾದ ಸುಕನ್ಯಾ ಹೆಚ್ , ಸುಜೀತ್ ರಾವ್ ಉಜಿರೆ ಜೊತೆಯಲಿದ್ದರು.


