Wednesday, May 15, 2024
Homeಕರಾವಳಿಉಡುಪಿತುಳು ಭಾಷೆಗೆ ಮನ್ನಣೆ; ತಾಲೂಕು ಮಟ್ಟದಲ್ಲಿ ನಡೆಯಲಿವೆ ಹಕ್ಕೋತ್ತಾಯ ಸಭೆಗಳು

ತುಳು ಭಾಷೆಗೆ ಮನ್ನಣೆ; ತಾಲೂಕು ಮಟ್ಟದಲ್ಲಿ ನಡೆಯಲಿವೆ ಹಕ್ಕೋತ್ತಾಯ ಸಭೆಗಳು

spot_img
- Advertisement -
- Advertisement -

ಮಂಗಳೂರು: ತುಳುವನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಈ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ಹೋರಾಟ ರೂಪಿಸಲು ವಿವಿಧ ತುಳು ಸಂಘಟನೆಗಳು ನಿರ್ಧರಿಸಿವೆ.

ತುಳುವಿನ ವಿವಿಧ ಸಂಘಟನೆಗಳ ಪ್ರಮುಖರು ಹೋರಾಟದ ರೂಪರೇಷೆಗಳ ಕುರಿತು ಇಲ್ಲಿನ ತುಳುಭವನದಲ್ಲಿ ಬುಧವಾರ ಸಮಾಲೋಚನೆ ನಡೆಸಿದರು.

ತುಳುವಿಗೆ ಸ್ಥಾನಮಾನ ಸಿಗಬೇಕೆಂಬ ಹೋರಾಟವನ್ನು ಸರ್ಕಾರಗಳು ಕಡೆಗಣಿಸುತ್ತಾ ಬಂದಿರುವ ಬಗ್ಗೆ ವಿವಿಧ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು. ‘ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಹೊರತು ಬೇರಾವ ಕಾರಣಗಲೂ ಇಲ್ಲ. ಚುನಾವಣೆ ಬರುವಾಗ ಎಲ್ಲ ರಾಜಕೀಯ ಪಕ್ಷಗಳಿಗೂ ತುಳು ನೆನಪಾಗುತ್ತದೆ. ಇದು ಇಲ್ಲಿಗೆ ಕೊನೆಯಾಗಬೇಕು. ತುಳುವಿಗ ಸ್ಥಾನಮಾನ ಒದಗಿಸುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ಆಗ್ರಹಿಸಿದರು.

‘ತುಳು ವಿದ್ವಾಂಸ ಎಸ್.ಯು.ಪಣಿಯಾಡಿ ನೇತೃತ್ವದಲ್ಲಿ ತುಳುವಿಗೆ ಮನ್ನಣೆ ಕೊಡಿಸುವ ಹೋರಾಟ ರೂಪಿಸಲು ‘ತುಳುವ ಮಹಾಸಭೆ’ 94 ವರ್ಷಗಳ ಹಿಂದೆ ರೂಪುಗೊಂಡಿತ್ತು. ಇದಕ್ಕೆ 100 ವರ್ಷ ಸಲ್ಲುವ ಮುನ್ನ ಸಂವಿಧಾನದ 8ನೇ ಪರಿಚ್ಚೇದದಲ್ಲಿ ತುಳು ಸೇರಿರಬೇಕು’ ಎಂದು ತುಳು ಹೋರಾಟಗಾರ ರಾಜೇಶ್ ಆಳ್ವ ಸಲಹೆ ನೀಡಿದರು. ಇದಕ್ಕೆ ತುಳು ಹೋರಾಟದಲ್ಲಿ ಸಕ್ರಿಯರಗಿರುವ ಪ್ರಮುಖರೆಲ್ಲರೂ ಸಹಮತ ವ್ಯಕ್ತಪಡಿಸಿದರು.

ಸಭೆಯನ್ನು ಆಯೋಜಿಸಿದ್ದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ‘ತುಳುವಿಗೆ ರಾಜ್ಯದಲ್ಲಿ ಅಧಿಕೃತ ಭಾಷೆಯ ಸ್ಥಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಏಕೆ ಸ್ಥಾನ ಸಿಗಬೇಕು ಎಂಬುದಕ್ಕೆ ಪೂರಕ ದಾಖಲೆಗಳನ್ನು ಕ್ರೋಢೀಕರಿಸಲಿದ್ದೇವೆ. ಇದರಿಂದ ಸೇರಿದರೆ ತುಳುವರಿಗೆ ಆಗುವ ಅನುಕೂಲಗಳ ಬಗ್ಗೆಯೂ ಜಾಗೃತಿ ಮೂಡಿಸಲಿದ್ದೇವೆ. ಹೋರಾಟ ನಡೆಸದೇ ಯಾವುದೂ ದಕ್ಕದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲೂ ಈ ಕುರಿತ ಹಕ್ಕೊತ್ತಾಯ ಸಭೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ರೂಪಿಸಲಿದ್ದೇವೆ’ ಎಂದು ತಿಳಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಉಡುಪಿ ತುಳುಕೂಟದ ಕೃಷ್ಣಮೂರ್ತಿ, ಇಂಗ್ಲೆಂಡ್‌ನ ತುಳುಕೂಟದ ಅರವಿಂದ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಪುನರೂರು, ರಾಜೇಶ್ ಆಳ್ವ, ಫ್ರಾಂಕ್ಲಿನ್‌ ಡಿಸೋಜ, ಶಶಿ ಬಂಡಿಮಾರ್, ಪ್ರದೀಪ್ ಕುಮಾರ್ ಕಲ್ಕೂರ, ಕಾಂತಪ್ಪ, ಪ್ರಶಾಂತ, ಯೋಗೀಶ್ ಶೆಟ್ಟಿ ಜೆಪ್ಪು, ದಯಾನಂದ ಕತ್ತಲಸಾರ್, ವಿಶು ಶ್ರೀ.ಕೆ. ರೋಷನ್ ಮೊದಲಾದವರು ಸಲಹೆ ಸೂಚನೆ ನೀಡಿದರು. ಮಧುರಾಜ್ ನಿರೂಪಿಸಿದರು. ಸುಧಾಕರ್‌ ವಂದಿಸಿದರು.

ಸಮಾಲೋಚನೆ ಸಭೆಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತಸರ ಹಾಗೂ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಉದ್ಘಾಟಿಸಿದರು.

- Advertisement -
spot_img

Latest News

error: Content is protected !!