Wednesday, May 15, 2024
Homeಕ್ರೀಡೆಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಗೇರಿದ ರವಿ ದಹಿಯಾ ಸಾಧನೆಯ ಹಿಂದಿತ್ತು ಅಪ್ಪನ ಮರೆಯಲಾಗದ ತ್ಯಾಗ: ಮಗನಿಗಾಗಿ...

ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಗೇರಿದ ರವಿ ದಹಿಯಾ ಸಾಧನೆಯ ಹಿಂದಿತ್ತು ಅಪ್ಪನ ಮರೆಯಲಾಗದ ತ್ಯಾಗ: ಮಗನಿಗಾಗಿ ರಾಕೇಶ್ ದಹಿಯಾ ಪ್ರತಿದಿನ ಏನು ಮಾಡುತ್ತಿದ್ದರು ಗೊತ್ತಾ?

spot_img
- Advertisement -
- Advertisement -

ಟೋಕಿಯೊ: ಯುವ ಪೈಲ್ವಾನ್ ರವಿ ಕುಮಾರ್ ದಹಿಯಾ ಟೋಕಿಯೊ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೇರಿದ 2ನೇ ಭಾರತೀಯರೆನಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸತತ 4ನೇ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕುಸ್ತಿಪಟುವೊಬ್ಬರು ಪದಕ ಗೆದ್ದುಕೊಟ್ಟಂತಾಗಿದೆ. ಕುಸ್ತಿ ಚಿನ್ನ ಗೆದ್ದ ಮೊದಲ ಭಾರತೀಯರೆನಿಸುವ ಅವಕಾಶ ಈಗ ರವಿ ದಹಿಯಾ ಮುಂದಿದೆ. ಅವರ ಈ ಸಾಧನೆಯ ಹಿಂದೆ ತಂದೆ ರಾಕೇಶ್ ದಹಿಯಾ ಅವರ ಪಾತ್ರ ಮಹತ್ತರವಾದುದು.

ಹರಿಯಾಣದ ಸೋನೆಪತ್ ಜಿಲ್ಲೆಯ ನಹ್ರಿ ಗ್ರಾಮದ ರವಿ ದಹಿಯಾ, 10ನೇ ವಯಸ್ಸಿನಿಂದಲೇ ದೆಹಲಿಯ ಛತ್ರಶಾಲ್ ಸ್ಟೇಡಿಯಂನಲ್ಲಿ ಕೋಚ್ ಸತ್ಪಾಲ್ ಸಿಂಗ್ ಅವರಿಂದ ಕುಸ್ತಿ ತರಬೇತಿ ಪಡೆಯಲಾರಂಭಿಸಿದ್ದರು. ಆಗ ಕೃಷಿಕರಾಗಿರುವ ಅವರ ತಂದೆ ರಾಕೇಶ್ ದಹಿಯಾ ಮಗನ ಡಯೆಟ್‌ಗೆ ಹಾಲು ಮತ್ತು ಹಣ್ಣುಗಳನ್ನು ನೀಡುವ ಸಲುವಾಗಿ ನಹ್ರಿಯಿಂದ ದೆಹಲಿಗೆ (60 ಕಿಮೀ) ರೈಲಿನಲ್ಲಿ ಹೋಗಿ ಬರುತ್ತಿದ್ದರು. ಈ ಕೆಲಸವನ್ನು ಸುಮಾರು 10 ವರ್ಷಗಳ ಕಾಲ ನಿರಂತರವಾಗಿ ಅಂದರೆ ಕರೊನಾದಿಂದಾಗಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಾಗುವವರೆಗೂ ಮಾಡುತ್ತ ಬಂದಿದ್ದರು.

ಬೆಳಗ್ಗೆ 3.30ಕ್ಕೆ ಎದ್ದು ನಹ್ರಿಯಲ್ಲಿನ ಸಮೀಪದ ಆಜಾದ್‌ಪುರ ಅಂದರೆ 5 ಕಿಮೀ ದೂರದ ರೈಲ್ವೇ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಅಲ್ಲಿಂದ ದೆಹಲಿಗೆ ತೆರಳುತ್ತಿದ್ದ ಅವರು, ರೈಲ್ವೇ ಸ್ಟೇಷನ್‌ನಿಂದ 2 ಕಿಮೀ ದೂರದ ಛತ್ರಶಾಲಾ ಕ್ರೀಡಾಂಗಣಕ್ಕೆ ಮತ್ತೆ ನಡೆಯುತ್ತಿದ್ದರು. ಮಗನಿಗೆ ಆಹಾರ ವಿತರಿಸಿದ ಬಳಿಕ ಮರಳಿ ಬಂದು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಇದೀಗ ಅವರ ಎಲ್ಲ ಪರಿಶ್ರಮಗಳಿಗೆ ಮಗನ ಮೂಲಕ ಯಶಸ್ಸು ಲಭಿಸಿದೆ.

‘ನನ್ನ ಕನಸು ಇಂದು ನನಸಾಗಿದೆ. ರವಿ ಚಿನ್ನದ ಪದಕದೊಂದಿಗೆ ಮರಳಲಿ ಎಂಬುದು ಇನ್ನು ಉಳಿದಿರುವ ಏಕೈಕ ಆಸೆ’ ಎಂದು ರಾಕೇಶ್ ದಹಿಯಾ ಹೇಳಿದ್ದಾರೆ. ಅವರಿಗೂ ಕುಸ್ತಿಪಟುವಾಗುವ ಆಸೆ ಇದ್ದರೂ ಅದು ಕೈಗೂಡಿರಲಿಲ್ಲ. ಹೀಗಾಗಿ ಮಗನ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.

2015ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ಮೊದಲ ಬಾರಿ ಮಿಂಚಿದ್ದ ರವಿ, ಬಳಿಕ 2018ರಲ್ಲಿ ವಿಶ್ವ 23 ವಯೋಮಿತಿ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ ಗೆದ್ದಿದ್ದರು. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರೆ, 2020 ಮತ್ತು 2021ರ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಜಯಿಸಿದ್ದರು. ರವಿ ದಹಿಯಾ ಒಲಿಂಪಿಕ್ಸ್ ಕುಸ್ತಿ ಫೈನಲ್‌ಗೇರಿದ 2ನೇ ಭಾರತೀಯ. ಸುಶೀಲ್ ಕುಮಾರ್ 2012ರಲ್ಲಿ ಈ ಸಾಧನೆ ಮೊದಲಿಗರೆನಿಸಿದ್ದರು. ಸತತ 4ನೇ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕುಸ್ತಿಪಟುಗಳಿಂದ ಪದಕ ಒಲಿದಿದೆ. 2008ರಲ್ಲಿ ಸುಶೀಲ್, 2012ರಲ್ಲಿ ಸುಶೀಲ್, ಯೋಗೇಶ್ವರ್, 2016ರಲ್ಲಿ ಸಾಕ್ಷಿ ಮಲಿಕ್ ಈ ಸಾಧನೆ ಮಾಡಿದ್ದರು. ರವಿ ದಹಿಯಾ ಒಲಿಂಪಿಕ್ಸ್ ಪದಕ ಗೆದ್ದ ಭಾರತದ 5ನೇ ಪೈಲ್ವಾನ್. ಕೆಡಿ ಜಾಧವ್ (1952), ಸುಶೀಲ್ ಕುಮಾರ್ (2008, 2012), ಯೋಗೇಶ್ವರ್ ದತ್ (2012) ಮತ್ತು ಸಾಕ್ಷಿ ಮಲಿಕ್ (2016) ಹಿಂದಿನ ಸಾಧಕರು.

- Advertisement -
spot_img

Latest News

error: Content is protected !!