Wednesday, June 24, 2026
Homeಅಪರಾಧವೈದ್ಯೆ ಮೇಲಿನ ರೇಪ್- ಹತ್ಯೆ ಪ್ರಕರಣ; ಸುಪ್ರೀಂ ಕೋರ್ಟ್ ನಿಂದ ಆಸ್ಪತ್ರೆಗಳಲ್ಲಿ ಏಕರೂಪದ ಭದ್ರತಾ ವ್ಯವಸ್ಥೆ...

ವೈದ್ಯೆ ಮೇಲಿನ ರೇಪ್- ಹತ್ಯೆ ಪ್ರಕರಣ; ಸುಪ್ರೀಂ ಕೋರ್ಟ್ ನಿಂದ ಆಸ್ಪತ್ರೆಗಳಲ್ಲಿ ಏಕರೂಪದ ಭದ್ರತಾ ವ್ಯವಸ್ಥೆ ಜಾರಿಗೆ ತರುವ ಭರವಸೆ

- Advertisement -
- Advertisement -

ನವದೆಹಲಿ: ಕೊಲ್ಕೊತ್ತಾದ ವೈದ್ಯೆ ಮೇಲಿನ ರೇಪ್- ಹತ್ಯೆ ಬಗ್ಗೆ ದೇಶಾದ್ಯಂತ ಕಳವಳ ವ್ಯಕ್ತವಾಗಿದ್ದು, ಈ ಘಟನೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಭದ್ರತೆ ಬಗ್ಗೆ ಏಕರೂಪದ ಪ್ರೋಟೋಕಾಲ್ ಜಾರಿಗೆ ತರುವ ಬಗ್ಗೆ ಶಿಫಾರಸುಗಳನ್ನು ನೀಡಲು ಹತ್ತು ಮಂದಿಯ ಟಾಸ್ಕ್ ಫೋರ್ಸ್ ಕಮಿಟಿಯನ್ನು ನೇಮಕ ಮಾಡುವುದಾಗಿ ಹೇಳಿದೆ.

ಆರೋಗ್ಯ ಸೇವಾ ಕೇಂದ್ರಗಳಲ್ಲಿ ಭದ್ರತೆ ಬಗ್ಗೆ ಏಕರೂಪದ ಪ್ರೋಟೋಕಾಲ್ ಜಾರಿಗೆ ತರುವ ಬಗ್ಗೆ ಪಶ್ಚಿಮ ಬಂಗಾಳದ ಮಹಿಳಾ ವೈದ್ಯೆಯ ಕೊಲೆ ಪ್ರಕರಣದ ಕುರಿತ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ಸಿಜೆಐ ಚಂದ್ರಚೂಡ್ ಈ ಕುರಿತು, ವೈದ್ಯರನ್ನು ಒಳಗೊಂಡ ಹತ್ತು ಮಂದಿಯ ಕಮಿಟಿಯು, ಸೇವಾ ಕೇಂದ್ರಗಳಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷೆ ಬಗ್ಗೆ ಏಕರೂಪದ ಮಾರ್ಗದರ್ಶಿ ಸೂತ್ರಗಳನ್ನು ನೀಡಬೇಕು. ದೇಶದ ಆದ್ಯತೆ ಆರೋಗ್ಯ ಸೇವೆ ನಿರತ ಮಹಿಳಾ ವೈದ್ಯರ ಸುರಕ್ಷೆ ಬಗ್ಗೆ ಖಾತರಿಪಡಿಸುವುದು. ದೇಶ ಮತ್ತೊಂದು ಈ ರೀತಿಯ ಅತ್ಯಾಚಾರ, ಕೊಲೆ ಘಟನೆಯನ್ನು ನೋಡಲು ಬಯಸುವುದಿಲ್ಲ, ಎಂದು ಹೇಳಿದ್ದಾರೆ.

ಈ ಕುರಿತು ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಹತ್ತು ಮಂದಿಯ ಟಾಸ್ಕ್ ಫೋರ್ಸ್ ಕಮಿಟಿ ಮೂರು ವಾರಗಳಲ್ಲಿ ಕೋರ್ಟಿಗೆ ಸಲ್ಲಿಸಲಿದೆ. ಅಂತಿಮ ವರದಿ ಇನ್ನೆರಡು ತಿಂಗಳಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಇನ್ನು ಪಶ್ಚಿಮ ಬಂಗಾಳ ಸರಕಾರದ ನಡೆಯನ್ನು ವಿಚಾರಣೆ ಸಂದರ್ಭದಲ್ಲಿ ಟೀಕಿಸಿದ್ದು, ಪೊಲೀಸರು ಎಫ್ಐಆರ್ ಮಾಡುವಾಗ ವಿಳಂಬ ಮಾಡಿದ್ದೇಕೆ? ಹಾಗೂ ಘಟನೆ ಕುರಿತು ಆಸ್ಪತ್ರೆ ಆಡಳಿತದ ವರ್ತನೆಯನ್ನು ಕೂಡ ಪ್ರಶ್ನೆ ಮಾಡಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್, ಕೊಲ್ಕೊತ್ತಾದ ಆರ್.ಜಿ ಕಾರ್ ಆಸ್ಪತ್ರೆಗೆ ಸಿಐಎಸ್ಎಫ್ ಮತ್ತು ಸಿಆರ್ ಪಿಎಫ್ ಭದ್ರತೆಯನ್ನು ನೀಡುವಂತೆ ಸೂಚನೆ ನೀಡಿದೆ. ವೈದ್ಯರು ಪ್ರತಿಭಟನೆ ಕೈಬಿಟ್ಟು ತಮ್ಮ ಕರ್ತವ್ಯಕ್ಕೆ ಮರಳುವಂತೆ ಕೇಳಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಆಸ್ಪತ್ರೆ ಅಧಿಕಾರಿಗಳನ್ನು, ಪೊಲೀಸರು ಎಫ್ಐಆರ್ ಹಾಕುವುದಕ್ಕೆ ಮರುದಿನ ಮಧ್ಯರಾತ್ರಿ ವರೆಗೆ ಏಕೆ ಕಾಯಬೇಕಾಯಿತು. ಆಸ್ಪತ್ರೆ ಅಧಿಕಾರಿಗಳು ವೈದ್ಯೆಯ ಹತ್ಯೆಯನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ಬಿಂಬಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೊಲ್ಕತಾ ಘಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರು, ವೈದ್ಯರು ಪ್ರತಿಭಟನೆ, ಕ್ಯಾಂಡಲ್ ಮಾರ್ಚ್ ನಡೆಸಿದ್ದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!