ಕನ್ನಡದ ‘ಕೃಷ್ಣ ರುಕ್ಮಿಣಿ, ‘ಗಡಿಬಿಡಿ ಗಂಡ’, ‘ಮಾಂಗಲ್ಯಂ ತಂತುನಾನೇನ’, ‘ಬಾ ಬಾರೋ ರಸಿಕ’ ಚಿತ್ರಗಳಲ್ಲಿ ನಟಿಸಿ ಹೆಸರು ಹಾಗೂ ದುಡ್ಡುಮಾಡಿಕೊಂಡವರು ನಟಿ ರಮ್ಯಾ ಕೃಷ್ಣ. ಆದರೆ ಅವರು ಹೆಚ್ಚು ಗಮನ ಕೊಟ್ಟಿದ್ದು ತಮಿಳು ಮತ್ತು ತೆಲುಗು ಚಲನಚಿತ್ರಗಳಿಗೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಅವರು ಹಾಟ್ ಪಾತ್ರಗಳಲ್ಲಿ ನಟಿಸುವ ಜಮಾನಾ ಮುಗಿದು ಯಾವುದೋ ಕಾಲವಾಗಿದೆಯಾದರೂ, ಅವರಿಗಿರುವ ಬೇಡಿಕೆ ಇನ್ನೂ ಕುಗ್ಗಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಯೊಂದು ಸಾಕ್ಷಿಯಾಗಿದೆ. ಆಯುಷ್ಮಾನ್ ಖುರಾನಾ ಮತ್ತು ಟಬು ನಟಿಸಿರುವ ಹಿಂದಿಯ ‘ಅಂಧಾಧುನ್’ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಟಬುವಿನ ಪಾತ್ರವನ್ನು ತೆಲುಗಲ್ಲಿ ನಟಿಸುವುದಕ್ಕೆ ರಮ್ಯಾ ಕೃಷ್ಣಾ ದುಬಾರಿ ಸಂಭಾವನೆ ಕೇಳಿದ್ದಾರಂತೆ.
ಪ್ರಸ್ತುತ ದಿನವೊಂದಕ್ಕೆ 10 ಲಕ್ಷ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಿರುವ ರಮ್ಯಾ ಕೃಷ್ಣ, ಸದರಿ ಪಾತ್ರಕ್ಕೆ ಇನ್ನೂ ಹೆಚ್ಚಿನ ಸಂಭಾವನೆ ಕೇಳಿರುವುದು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಪರಪುರುಷನ ಜತೆ ಸಂಬಂಧ ಹೊಂದಿರುವ ಮಧ್ಯವಯಸ್ಕ ಮಹಿಳೆಯ ಪಾತ್ರ ಇದಾಗಿದ್ದು, ಇದಕ್ಕೆ ರಮ್ಯಾ ಕೃಷ್ಣ ಅವರೇ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿರುವುದರಿಂದ ಭಾರಿ ಸಂಭಾವನೆಗೆ ಗ್ರೀನ್ ಸಿಗ್ನಲ್ ದಕ್ಕಿದೆಯಂತೆ!
ಕೃಷ್ಣಾರ್ಜುನ ಯುದ್ಧಂ’, ‘ವೆಂಕಟಾದ್ರಿ ಎಕ್ಸ್ ಪ್ರೆಸ್’, ‘ಎಕ್ಸ್ ಪ್ರೆಸ್ ರಾಜ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರುವ ಮೆರ್ಲಪಾಕ ಗಾಂಧಿಯವರು ಈ ಚಿತ್ರದ ಸಾರಥ್ಯ ವಹಿಸಲಿದ್ದು, ಮೂಲದಲ್ಲಿ ಆಯುಷ್ಮಾನ್ ಖುರಾನಾ ನಿರ್ವಹಿಸಿದ ಪಾತ್ರದಲ್ಲಿ ನಿತಿನ್ ಕಾಣಿಸಿಕೊಳ್ಳಲಿರುವುದರ ಜತೆಗೆ ಚಿತ್ರವನ್ನೂ ನಿರ್ಮಿಸಲಿದ್ದಾರೆ. ಒಟ್ಟಿನಲ್ಲಿ, ಹಿಂದಿಯಲ್ಲಿ ಸೂಪರ್ ಹಿಟ್ ಎನಿಸಿಕೊಂಡ ‘ಅಂಧಾಧುನ್’ ತೆಲುಗಿನಲ್ಲಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಚಿತ್ರರಸಿಕರನ್ನು ಆವರಿಸಿಕೊಂಡಿರುವುದಂತೂ ಖರೆ!