ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ನಟಿ ರಾಗಿಣಿ ತಮ್ಮ ಮನೆಯಿಂದ ರುಚಿಕರವಾದ ಅಡುಗೆ ತಯಾರಿಸಿ ರವಾನಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದಾರೆ. ಮನೆಗೂ ಹೋಗದೆ ದಿನಪೂರ್ತಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಸೇವೆ ಮಾಡುವ ವೈದ್ಯರಿಗಾಗಿ ರಾಗಿಣಿಯವರು ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಗಿಣಿಯವರು, ಆರ್.ಡಿ ಕಿಚ್ಚನ್ ವತಿಯಿಂದ ಆರೋಗ್ಯ ರಕ್ಷಣಾ ಹೀರೋಗಳಿಗೆ ಮನೆಯಲ್ಲೇ ಊಟ ತಯಾರಿಸಿ ನೀಡಲಾಗುತ್ತಿದೆ. ಈ ಮೂಲಕ 150 ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟವನ್ನು ನಾವು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅವರಿಗಾಗಿ ಸ್ವಲ್ಪ ಪ್ರೀತಿಯಿಂದ ಏನಾದರೂ ಮಾಡೋಣ ಎಂದು ಬರೆದುಕೊಂಡಿದ್ದಾರೆ.
ರಾಗಿಣಿಯವರ ಈ ಕೆಲಸಕ್ಕೆ ಅವರ ಮನೆಯವರು ಕೂಡ ಸಾಥ್ ನೀಡಿದ್ದಾರೆ. ಮನೆಮಂದಿಯೆಲ್ಲ ಸೇರಿ ರುಚಿಕರವಾದ ಅಡುಗೆ ಮಾಡಿ ಅದನ್ನು ಮಾಸ್ಕ್ ಧರಿಸಿಯೇ ಪ್ಯಾಕ್ ಮಾಡಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಊಟ ಸಿದ್ಧಗೊಳಿಸುತ್ತಿರುವ ಫೋಟೋವನ್ನು ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.