ಬೆಂಗಳೂರು: ನಕಲಿ ಅಶ್ಲೀಲ ಸಿಡಿ ಸೃಷ್ಟಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಮಾನಹಾನಿಗೆ ಯತ್ನಿಸಿದ ಆರೋಪಿಗಳು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆ ರದ್ದುಪಡಿಸುವಂತೆ ಕೋರಿ ವಿಶ್ವನಾಥ ಅಲಿಯಾಸ್ ವಿಶು ಗೋಪಿ ಭಟ್ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ನ ಧಾರವಾಡ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ವಿಚಾರಣೆ ನಡೆಸಿತು.ಬಳಿಕ ತೀರ್ಪು ಪ್ರಕಟಿಸಿ, ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿತರ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸುವಂತೆ ಕುಮಟಾ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಪೀಠ ನಿರ್ದೇಶಿಸಿದೆ.ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಅಸಮಾಧಾನ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ರಾಘವೇಶ್ವರ ಭಾರತೀ ಶ್ರೀಗಳ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ಅಶ್ಲೀಲ ಸಿಡಿ ಸೃಷ್ಟಿಸಿದ ಆರೋಪ ಕೇಳಿಬಂದಿತ್ತು.
ಈ ಆರೋಪಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದರು.ಬಂಧಿತ ಆರೋಪಿಗಳು ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ಸುಳ್ಳು ಆರೋಪ ಮಾಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಆರೋಪಿತರ ಮನವಿಯನ್ನು ತಿರಸ್ಕರಿಸಿದ್ದು, ವಿಚಾರಣೆಯನ್ನು ವರ್ಷದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದೆ.