ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದನದಲ್ಲಿ ಪ್ರಸ್ತಾಪ ಮಾಡಿದ ಶಾಸಕ ಅಶೋಕ್ ಕುಮಾರ್ ರೈ, ತುಳು ಭಾಷೆಯಲ್ಲೇ ಮಾತನಾಡಿ ಆಗ್ರಹಿಸಿದ್ದಾರೆ. ಇದೇ ವೇಳೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೂಡಾ ತುಳುವಿನಲ್ಲಿಯೇ ಮಾತನಾಡಿ ಬೆಂಬಲಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆಗೆ ಉತ್ತರಿಸಿದ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕಾಮತ್ ರವರು ತುಳುವಿನಲ್ಲಿ ಏನು ಬೈದರು ಎಂದು ಹೇಳಬೇಕು ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಯು.ಟಿ. ಖಾದರ್, ನಮ್ಮ ಕಡೆ ತುಳುವಿನಲ್ಲಿ ಬೈದರೂ ಪ್ರೀತಿಯಿಂದ ಹೇಳಿದಂತೆ ಎಂದರು.
ತುಳು ಭಾಷೆಯ ಜನರು ಬಹಳ ಒಳ್ಳೆಯ ಜನರು, ಪ್ರೀತಿ ಉಳ್ಳವರು, ನಾವು ಒಂದು ಸಮಿತಿ ಮಾಡಿದ್ದೆವು, ಆಸಮಿತಿ ಎಲ್ಲಾ ಕಡೆ ಭೇಟಿ ಮಾಡಿ ಬಂದಿದೆ, ಅವರು ವರದಿ ಕೊಟ್ಟ ನಂತರ ನಿಮ್ಮ ಜೊತೆ ಸಭೆ ಮಾಡುತ್ತೇವೆ,ಸಿಎಂ ಜೊತೆ ಮಾತನಾಡಿ ತೀರ್ಮಾನ ಮಾಡೋಣ ಎಂದು ಸಚಿವ ಶಿವರಾಜ್ ತಂಗಡಗಿ ಸದನದಲ್ಲಿ ಭರವಸೆ ನೀಡಿದರು.
ಮುಂದಿನ ಕ್ಯಾಬಿನೆಟ್ ಸಭೆ ಮಂಗಳೂರಿನಲ್ಲಿ ಮಾಡುವ ಯೋಚನೆ ಸರ್ಕಾರದಲ್ಲಿ ಇದೆ ಎಂಬ ಮಾಹಿತಿ ಇದ್ದು, ಅಂದಿನ ಕ್ಯಾಬಿನೆಟ್ ನಲ್ಲಾದರೂ ಇದರ ಬಗ್ಗೆ ಸೂಕ್ತ ತೀರ್ಮಾನ ಮಾಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರವನ್ನು ಆಗ್ರಹಿಸಿದರು.


