ಉಡುಪಿ: ತೆಂಗು ಧಾರಣೆ ದಿನೇದಿನೆ ಕುಸಿಯುತ್ತಿದ್ದರೂ ತೆಂಗಿನ ಎಣ್ಣೆಯ ದರ ಮಾತ್ರ ಗಗನಕ್ಕೇರುತ್ತಿದೆ. ಕೃಷಿಕರಿಂದ 8 ರೂ.,9 ರೂ.ಗಳಿಗೆ ಖರೀದಿಯಾಗುತ್ತಿರುವ ತೆಂಗಿನ ಕಾಯಿಯ ಎಣ್ಣೆಯ ದರ ಮಾತ್ರ ಕೆಜಿಗೆ 280 ರೂ.ಗಳಿಂದ 300 ರೂ. ವರೆಗೂ ಇದೆ.
ಕರಾವಳಿಯಲ್ಲಿ ಈ ವರ್ಷ ತೆಂಗಿನ ಕಾಯಿಯ ದರ ನಿರೀಕ್ಷೆಗೂ ಮೀರಿ ಕುಸಿದಿದೆ. ಸಿಪ್ಪೆ ಸಹಿತ ತೆಂಗಿನ ಕಾಯಿಯನ್ನು 8 ರೂ., 9 ರೂ.ಗಳಿಗೆ ಮತ್ತು ಸಿಪ್ಪೆ ತೆಗೆದ ತೆಂಗಿನ ಕಾಯಿಯನ್ನು ಕೆಜಿಗೆ 24 ರೂ.ಗಳಿಂದ 26 ರೂ.ಗಳಿಗೆ ಕೃಷಿಕರು ಸಗಟು ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ. ಸಗಟು ವ್ಯಾಪಾರಸ್ಥರಿಂದ ಅಂಗಡಿಯವರು ಖರೀದಿಸಿ ಕೆಜಿಗೆ 35 ರೂ.ಗಳಿಂದ 40 ರೂ.ಗಳಿಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಕೊಬ್ಬರಿ ಕೆ.ಜಿ. ಸರಾಸರಿ 120 ರೂ.ಗಳಿಂದ 130 ರೂ.ಗಳವರೆಗೂ ಇರುತಿತ್ತು. ಈಗ ಅದು ಕೂಡ ಕಡಿಮೆಯಾಗಿದೆ. ಸುಪೀರಿಯರ್ ಗುಣಮಟ್ಟದ ಕೊಬ್ಬರಿಯ ಕೆಜಿಗೆ 80 ರೂ.ಗಳಿಂದ 85 ರೂ. ಹಾಗೂ ಸಾಮಾನ್ಯ ಕೊಬ್ಬರಿಗೆ ಕೆಜಿಗೆ 70 ರೂ.ಗಳಿಂದ 80 ರೂ.ಗೆ ಇಳಿದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಗೆ ಯಾವ ಬೆಲೆ ನಿಗದಿ ಮಾಡಲಾಗುತ್ತದೆಯೋ ಅದರಂತೆ ಖರೀದಿ ನಡೆಯುತ್ತಿದೆ. ತೆಂಗಿಗೆ ಬೆಂಬಲ ಬೆಲೆ ಇಲ್ಲ. ಕೊಬ್ಬರಿಯ ಬೆಲೆ ತೀರ ಕುಸಿತ (ಸುಮಾರು 25 ರೂ.ಗಳಿಗೆ) ಕಂಡಾಗ ಮಾತ್ರ ಬೆಂಬಲ ಬೆಲೆಯಡಿ ಖರೀದಿಗೆ ಅವಕಾಶವಿದೆ. ಉಳಿದ ಸಮಯದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.