ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ತಾಕತ್ ಇದ್ದರೆ ನನ್ನ ಮುಂದೆ ಸಿದ್ದರಾಮಯ್ಯ ಗೋ ಮಾಂಸ ತಿನ್ನಲಿ ಎಂದು ಸವಾಲೊಡ್ಡಿದ್ದಾರೆ.
ಸಿದ್ದರಾಮಯ್ಯ ಅವರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಗೋ ಹತ್ಯೆ ಕಾಯಿದೆಯನ್ನು ರದ್ದುಗೊಳಿಸುತ್ತೇನೆ ಹಾಗೂ ಗೋ ಮಾಂಸ ತಿನ್ನುತ್ತೇನೆ ಎಂಬ ಹೇಳಿಕೆ ಕುರಿತಂತೆ ಬೀದರಲ್ಲಿ ಪ್ರಭು ಚೌಹಾಣ್ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಸಿದ್ದರಾಮಯ್ಯಗೆ ಆಹ್ವಾನ ಮಾಡುತ್ತಿದ್ದೇನೆ ನನ್ನ ಮುಂದೆ ಕುಳಿತು ಮಾಂಸ ತಿಂದು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು, ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ಆಗೆ ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕೆ ಎಂದು ಪ್ರಶ್ನಿಸಿದ್ದರು. ಇನ್ನೂ ಅಲ್ಪ ಸಂಖ್ಯಾತರ ಹಕ್ಕುಗಳು ಮತ್ತು ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದಿಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜೊತೆಗೆ ಇತರೆ ಧರ್ಮಗಳನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ದ್ವೇಷ, ಅಸೂಯೆ ಇದ್ದರೆ ನಾವು ಮನುಷ್ಯರಾಗಲು ಅರ್ಹರಲ್ಲ. ನಾವೆಲ್ಲ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದರು.