ಉಡುಪಿ: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಮೈಕ್ ಬಳಕೆಗೆ ಅನುಮತಿ ಪಡೆದಿಲ್ಲ ಎಂದು ಯಕ್ಷಗಾನ ಕಾರ್ಯಕ್ರಮಕ್ಕೆ ಪೊಲೀಸರು ತಡೆಯೊಡ್ದಲು ಮುಂದಾದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪೊಲೀಸರು ಬಂದು ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ಅಜೆಕಾರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶುಭಕರ ಅವರಿಂದ ಆಕ್ಷೇಪ ವ್ಯಕ್ತವಾಗಿದ್ದು, ರಾತ್ರಿ ಹತ್ತು ಗಂಟೆಯ ಬಳಿಕ ಧ್ವನಿವರ್ಧಕ ಬಳಸಿದ್ದಕ್ಕೆ ಪ್ರದರ್ಶನ ಸ್ಥಗಿತಗೊಳಿಸಲು ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷರನ್ನು ಬಂಧಿಸುವುದಾಗಿ ಹೇಳಿದ್ದು, ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೊನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಿಂದ ವಾಪಸ್ ತೆರಳಿದ್ದಾರೆ. ಜನವರಿ 10 ರಂದು ಮೈಕ್ ಅನುಮತಿಗಾಗಿ ಆಯೋಜಕರು ಗ್ರಾಮ ಪಂಚಾಯತ್ ಪಿಡಿಒ ಬಳಿ ತೆರಳಿದ್ದು, ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ ಎನ್ನಲಾಗಿದೆ.
ನಂತರ ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರೂ ಕೂಡಾ ಗ್ರಾಮ ಪಂಚಾಯತ್ ಅನುಮತಿ ತರುವಂತೆ ಪೊಲೀಸರು ಸೂಚಿಸಿದ್ದರು ಎನ್ನಲಾಗಿದೆ. ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಸೌಂಡ್ ಸಿಸ್ಟಮ್ ಮುಖ್ಯಸ್ಥ ಅಪ್ಪು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು,ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮುಂದಾಗಿರುವ ಹಿನ್ನೆಲೆಯಲ್ಲಿ ಅಜೆಕಾರು ಠಾಣೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ