ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಮಹಾರಾಷ್ಟ್ರದ ಬಿಡೆಯಲ್ಲಿನ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಸದಸ್ಯರು ನಗರದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ
ಇತ್ತೀಚೆಗಷ್ಟೆ ಎರಡನೇ ಮಗುವಿಗೆ ತಾಯಿಯಾದ ನಟಿ ಕರೀನಾ ಕಪೂರ್, ಗರ್ಭಿಣಿ ಆದಾಗಿನ ಅನುಭವಗಳು, ತಾಯಿಯಾಗುವ ಪಯಣದ ಮಹತ್ವ, ತೆಗೆದುಕೊಳ್ಳಬೇಕಾದ ಎಚ್ಚರಿಕೆ ಇತರೆ ವಿಷಯಗಳನ್ನು ಸೇರಿಸಿ ಪುಸ್ತಕವೊಂದನ್ನು ಹೊರತಂದಿದ್ದು, ಅದಕ್ಕೆ ‘ಕರೀನಾ ಕಪೂರ್ ಖಾನ್’ಸ್ ಪ್ರೆಗ್ನೆನ್ಸಿ ಬೈಬಲ್’ ಎಂದು ಹೆಸರಿಟ್ಟಿದ್ದರು.

ಈ ಬಗ್ಗೆ ಮಾತನಾಡಿರುವ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶಿಶ್ ಶಿಂಧೆ, ”ಪುಸ್ತಕಕ್ಕೆ ಬೈಬಲ್ ಎಂದು ಹೆಸರಿಟ್ಟಿರುವುದರಿಂದ ಕ್ರಿಶ್ಚಿಯನ್ನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ ಕರೀನಾ ಕಪೂರ್ ಹಾಗೂ ಆ ಪುಸ್ತಕದ ಮತ್ತೊಬ್ಬ ಲೇಖಕಿಯ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ದುಷ್ಕೃತ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದು, ಮತ್ತೊಬ್ಬರ ಧರ್ಮವನ್ನು ಅವಹೇಳನ ಮಾಡುವುದು) ಅಡಿಯಲ್ಲಿ ದೂರು ದಾಖಲಾಗಿದೆ ” ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವಾಜಿನಗರ ಪೊಲೀಸ್ ಠಾಣೆ ಅಧಿಕಾರಿ, ”ಕರೀನಾ ಕಪೂರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಘಟನೆ ಇಲ್ಲಿ ನಡೆದಿಲ್ಲವಾದ ಕಾರಣ ಎಫ್‌ಐಆರ್ ದಾಖಲಿಸಲಾಗಿಲ್ಲ. ಅವರಿಗೆ ಮುಂಬೈಗೆ ಹೋಗಿಯೇ ದೂರು ನೀಡುವಂತೆ ಸಲಹೆ ನೀಡಿದ್ದೇನೆ” ಎಂದಿದ್ದಾರೆ.
ಜುಲೈ 9 ರಂದು ಕರೀನಾ ಕಪೂರ್, ”ಕರೀನಾ ಕಪೂರ್ ಖಾನ್’ಸ್ ಪ್ರೆಗ್ನೆನ್ಸಿ ಬೈಬಲ್’ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಕರೀನಾ ಕಪೂರ್ ಹಾಗೂ ಅದಿತಿ ಶಿಂಧೆ ಭೀಮ್ಜಾನಿ ಬರೆದಿದ್ದಾರೆ. ಪುಸ್ತಕವನ್ನು ಜಗ್ಗರ್‌ನಟ್ ಬುಕ್ಸ್ ಹೊರತಂದಿದೆ.