Sunday, September 27, 2026
Homeಕರಾವಳಿಮಂಗಳೂರುಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರದ ಸಂಚು: ₹24 ಲಕ್ಷ ಸುಪಾರಿ ಪ್ರಕರಣ ಬಯಲಿಗೆ, CCB ತನಿಖೆಗೆ...

ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರದ ಸಂಚು: ₹24 ಲಕ್ಷ ಸುಪಾರಿ ಪ್ರಕರಣ ಬಯಲಿಗೆ, CCB ತನಿಖೆಗೆ ಆದೇಶ

- Advertisement -
- Advertisement -

ಮಂಗಳೂರು: ಕಳೆದ 2025ರ ಮೇ ತಿಂಗಳಲ್ಲಿ ನಡೆದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು 24 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಬೃಹತ್ ಸಂಚೊಂದನ್ನು ಮಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ.

ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಉಡುಪಿಯ ಸುದೀಪ್ ಹಾಗೂ ಆತನ ಸಹಚರರ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಗಂಭೀರತೆ ಪರಿಗಣಿಸಿ ಮುಂದಿನ ತನಿಖೆಯನ್ನು ಮಂಗಳೂರು ನಗರ ಸಿಸಿಬಿ (CCB) ಪೊಲೀಸರಿಗೆ ವಹಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ನಿವಾಸಿ ಅಭಿಷೇಕ್ (25) ಎಂಬವರು ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ.

ಉಡುಪಿಯ ಬಸ್ ನಿಲ್ದಾಣದ ಬಳಿಯ ಹೋಟೆಲ್ ಹಾಗೂ ಕಾರ್ಕಳದ ಅತ್ತೂರು ಚರ್ಚ್ ಬಳಿ ಅಭಿಷೇಕ್‌ನನ್ನು ಭೇಟಿಯಾಗಿದ್ದ ಆರೋಪಿ ಸುದೀಪ್ ಮತ್ತು ಆತನ ಸಹಚರ ಮಹೇಶ್, ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಬಜಪೆಯ ಕಿನ್ನಿಪದವಿನ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಈ ಕೃತ್ಯ ಎಸಗಿದರೆ 24 ಲಕ್ಷ ರೂಪಾಯಿ ನೀಡಲಾಗುವುದು ಹಾಗೂ ಜೈಲಿಗೆ ಹೋದರೆ ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು 5,000 ರೂಪಾಯಿ ಮೌಲ್ಯದ ದಿನಸಿ ಹಾಗೂ 15,000 ರೂಪಾಯಿ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು.

ಆರೋಪಿಗಳ ಸೂಚನೆಯಂತೆ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್ ಸ್ಕಾರ್ಪಿಯೋ ಕಾರಿನಲ್ಲಿ ತೆರಳಿ ಕಿನ್ನಿಪದವಿನ ವ್ಯಕ್ತಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ ಸುಳ್ಯದ ಅಲೆಟ್ಟಿ ಗ್ರಾಮದ ಚಿಂತನ್ ಎಂಬಾತನನ್ನು ಸಂಪರ್ಕಿಸಿ ಕೃತ್ಯಕ್ಕಾಗಿ ಎರಡು ತಲವಾರುಗಳನ್ನು ಸಿದ್ಧವಾಗಿರಿಸಿಕೊಂಡಿದ್ದರು.

ಹತ್ಯೆ ಮಾಡಲು ಆರೋಪಿಗಳಿಂದ ವಾಟ್ಸಾಪ್ ಮೂಲಕ ತೀವ್ರ ಒತ್ತಡ ಬರುತ್ತಿದ್ದ ಸಮಯದಲ್ಲೇ ದೂರುದಾರ ಅಭಿಷೇಕ್ ಅವರ ಪತ್ನಿಗೆ ಹೆರಿಗೆಯಾಗಿದೆ. ಮಗುವಿನ ಜನನದ ನಂತರ ಮನಪರಿವರ್ತನೆಗೊಂಡ ಅಭಿಷೇಕ್, ಜೈಲು ಸೇರಿದರೆ ಕುಟುಂಬ ಅನಾಥವಾಗುತ್ತದೆ ಎಂಬ ಭಯದಿಂದ ಕೃತ್ಯದಿಂದ ಹಿಂದೆ ಸರಿದಿದ್ದಾರೆ. ಬಳಿಕ ಆರೋಪಿಗಳೊಂದಿಗೆ ನಡೆಸಿದ್ದ ವಾಟ್ಸಾಪ್ ಚಾಟ್‌ಗಳು, ಯುಪಿಐ ಹಣ ವರ್ಗಾವಣೆ ಸಾಕ್ಷ್ಯಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಸಮೇತ ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 55 ಹಾಗೂ 61(2)(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಅವರು ಮಾತನಾಡಿ, “ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಮಾನ್ಯವಾಗುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ 2025ರ ಮೇ 1ರಂದು ಸುಹಾಸ್ ಶೆಟ್ಟಿ ಎಂಬವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿದ್ದು, 11 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಇದೀಗ ಅದೇ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ರೂಪಿಸಿದ್ದ ಕೊಲೆ ಸಂಚನ್ನು ಮಂಗಳೂರು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!