ಬೆಳ್ತಂಗಡಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುವ ಪಿಂಚಣಿಯ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದೊಡ್ಡ ನೆಮ್ಮದಿ ತಂದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಣ್ಣಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಲಭ್ಯವಿದ್ದ 23,14,544 ಫಲಾನುಭವಿಗಳ ದಾಖಲೆಗಳನ್ನು ಮೊಬೈಲ್ ಆ್ಯಪ್ ಮೂಲಕ ಭೌತಿಕವಾಗಿ ಪರಿಶೀಲಿಸಿದಾಗ, ಸುಮಾರು 18,06,032 ಪಿಂಚಣಿದಾರರ ವಾರ್ಷಿಕ ಆದಾಯವು ಹಳೆಯ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿತ್ತು. ಈ ಕಾರಣದಿಂದ ಅವರ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
18 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸಿಕ್ಕ ಅಭಯ ಇದೀಗ ರಾಜ್ಯ ಸರ್ಕಾರ ಮಾನವೀಯ ನಿಲುವು ತಳೆದು ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಏರಿಸಿದೆ. ಇದರಿಂದಾಗಿ ಆದಾಯ ಮಿತಿಯ ತೊಡಕಿನಿಂದ ಪಿಂಚಣಿ ಕಳೆದುಕೊಂಡಿದ್ದ 18,06,032 ಫಲಾನುಭವಿಗಳಿಗೆ ಮತ್ತೆ ಮಾಸಿಕ ಪಿಂಚಣಿ ದೊರೆಯಲು ಹಾದಿ ಸುಗಮವಾಗಿದೆ.
“ಬಡವರು, ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಈ ನಿಟ್ಟಿನಲ್ಲಿ ಆದಾಯ ಮಿತಿ ಹೆಚ್ಚಿಸಿ, ಲಕ್ಷಾಂತರ ಕುಟುಂಬಗಳ ಕಣ್ಣೀರು ಒರೆಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಕಷ್ಟದಲ್ಲಿರುವ ಬಡಜನರ ಪರವಾದ ಮಾನವೀಯ ಕ್ರಮ” ಎಂದು ರಕ್ಷಿತ್ ಶಿವರಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


