Friday, June 5, 2026
Homeತಾಜಾ ಸುದ್ದಿಮಂಗಳೂರು: ಕಡಲಬ್ಬರದ ಹೊಡೆತಕ್ಕೆ ಪಣಂಬೂರು ಬೀಚ್‌ ಮಾಯ: ಎಚ್ಚರಿಕೆಯ ನಡುವೆಯೂ ನಿಲ್ಲದ ಸೆಲ್ಫಿ ಸಾಹಸ

ಮಂಗಳೂರು: ಕಡಲಬ್ಬರದ ಹೊಡೆತಕ್ಕೆ ಪಣಂಬೂರು ಬೀಚ್‌ ಮಾಯ: ಎಚ್ಚರಿಕೆಯ ನಡುವೆಯೂ ನಿಲ್ಲದ ಸೆಲ್ಫಿ ಸಾಹಸ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದ ಅಬ್ಬರಿಸುತ್ತಿದ್ದ ವರುಣರಾಯನ ಪ್ರಪಾತ ಇದೀಗ ಕೊಂಚ ತಗ್ಗಿದೆ. ಮಳೆ ಪ್ರಮಾಣ ಇಳಿಕೆಯಾದರೂ ಕಡಲಿನ ಅಬ್ಬರ ಜೋರಾಗಿದೆ. ಸಮುದ್ರ ತೀರದ ಮರಗಳು, ಮನೆಗಳು ಕಡಲ ಗರ್ಭ ಸೇರುತ್ತಿದೆ. ಕಡಲಬ್ಬರದ ಹೊಡೆತಕ್ಕೆ ಪಣಂಬೂರು ಬೀಚ್‌ ಮಾಯವಾಗಿದೆ..!


ಬೀಚ್‌ ತೀರದಲ್ಲಿದ್ದ ಮರಗಳು ಅಡ್ಡಬಿದ್ದಿದ್ದರೆ, ಸಾಲು ಸಾಲು ತೆಂಗಿನ ಮರಗಳು ಇಂದೋ ನಾಳೆಯೋ ಮಗುಚಿ ಬೀಳುವ ಸ್ಥಿತಿಯಲ್ಲಿದೆ. ಬೀಚ್‌ ವೀಕ್ಷಣೆಗೆ ಅನುಕೂಲವಾಗಲು ರಚಿಸಿರುವ ಸುಸಜ್ಜಿತ ವಿಹಾರ ತಾಣಗಳು ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ಈ ವಿಹಾರ ತಾಣಗಳ ಪಂಚಾಂಗದ ಕಲ್ಲುಗಳೇ ಕುಸಿದು ಬಿದ್ದು ಸಮುದ್ರ ಪಾಲಾಗುತ್ತಿವೆ. ಇದೇ ರೀತಿ ಆರ್ಭಟ ಒಂದೆರಡು ದಿನ ಮುಂದುವರಿದರೆ ಎರಡೂ ವಿಹಾರ ತಾಣಗಳು ಕಡಲಿನ ಪಾಲಾಗಲಿದೆ. ಪಣಂಬೂರು ಬೀಚ್‌ನಲ್ಲಿ ನಿರ್ಮಿಸಿದ ಸುಮಾರು 60 ಅಡಿ ಎತ್ತರದ ಹಳೇ ಸಿಗ್ನಲ್‌ ಲೈಟ್‌ ಕೂಡಾ ಕುಸಿಯುವ ಭೀತಿ ಎದುರಾಗಿದ್ದು, ಕಡಲ ಅಲೆಗಳು ಸಿಗ್ನಲ್‌ ಲೈಟ್‌ನ್ನು ಸುತ್ತುವರಿದಿದೆ. ಕಡಲಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಬೀಚ್‌ಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ತೀರದುದ್ದಕ್ಕೂ ಹಗ್ಗವನ್ನು ಕಟ್ಟಲಾಗಿದೆ. ಹಾಗಿದ್ದರೂ ಕೆಲವರು ಹಗ್ಗವನ್ನು ಬೇಧಿಸಿ ಸೆಲ್ಫಿ ತೆಗೆಯುವ ಸಾಹಸ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

- Advertisement -

Latest News

error: Content is protected !!