Sunday, May 19, 2024
Homeಕರಾವಳಿಮಂಗಳೂರುಹಿರಿಯ ಜಾನಪದ ವಿದ್ವಾಂಸ,ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಹಿರಿಯ ಜಾನಪದ ವಿದ್ವಾಂಸ,ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

spot_img
- Advertisement -
- Advertisement -

ಸುಳ್ಯ; ಹಿರಿಯ ಜಾನಪದ ವಿದ್ವಾಂಸ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ , ನಿವೃತ್ತ ಉಪನ್ಯಾಸಕ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಅವರು ವಿಧಿವಶರಾಗಿದ್ದಾರೆ.


ಸುಳ್ಯ ತಾಲೂಕಿನ ಪೆರುವಾಜೆಯಲ್ಲಿರುವ ತನ್ನ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಮಂಗಳವಾರ ಸಂಜೆ ವೇಳೆಗೆ ಏರುಪೇರು ಉಂಟಾಗಿತ್ತು. ಈ ಹಿನ್ನೆಲೆ ನಿನ್ನೆ ರಾತ್ರಿ ಅವರನ್ನು ಪುತ್ತೂರಿನ  ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮೂಲತಃ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಲ್ತಾಡಿಯವರಾದ ಇವರು, ಪುತ್ತೂರು ಹೊರವಲಯದ ಬೆದ್ರಾಳದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಕೆಲವು ಸಮಯದಿಂದ ಬೆಳ್ಳಾರೆಯ ಪೆರುವಾಜೆಯಲ್ಲಿರುವ ಮಗಳ ಮನೆಯಲ್ಲಿದ್ದರು. 

ಡಾ.ಪಾಲ್ತಾಡಿ ಅವರು ಕೆಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ಸುದೀರ್ಘ ಅವಧಿಗೆ ಶಿಕ್ಷಕರಾಗಿ, ಬಳಿಕ ಮುಖ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. 1994ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಚನೆಯಾದಾಗ ಅದರ ಮೊದಲ ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸಿದ್ದರು. ಸೇವಾ ನಿವೃತ್ತಿಯ ಬಳಿಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ನಡೆಸಿ ಸಿದ್ಧಪಡಿಸಿದ್ದ ಮಹಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪ್ರಾಪ್ತವಾಗಿತ್ತು.

ಕಲ್ಕುಡ–ಕಲ್ಲುರ್ಟಿ ಸಂಸ್ಕೃತಿ ಶೋಧ, ತುಳುವರ ಜನಪದ ಕಲೆಗಳು, ಪಂಚಶಿಲ್ಪ, ಜನಪದ ಕುಣಿತಗಳು, ಜಾನಪದ ಮಿನದನ, ಭೂತಾಳ ಪಾಂಡ್ಯೆ, ನಾಗಬೆರ್ಮರು, ಕೆಡ್ಡಸ, ಮದ್ದುಂಟು ರೋಗಕ್ಕೆ, ತುಳುನಾಡಿನ ಪಾಣಾರರು, ಅಮರಸುಳ್ಯದ ಕ್ರಾಂತಿವೀರ, ಧರ್ಮರಸು ಉಳ್ಳಾಕುಲು, ತುಳುನಾಡಿನ ಜನಪದ ಕತೆಗಳು, ತುಳು ಸಂಸ್ಕೃತಿದ ಪೊಲಬು, ಆಟಿ ಮುಂತಾದ ಅನೇಕ ತುಳು, ಕನ್ನಡ ಸಂಶೋಧನಾ ಕೃತಿ, ಕವಿತೆ, ವ್ಯಕ್ತಿಚರಿತ್ರೆ, ಯಕ್ಷಗಾನ ಪ್ರಸಂಗ, ಬಾಲಸಾಹಿತ್ಯ, ಕಥೆಗಳನ್ನು ಬರೆದು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರು ಮಾಡಿರುವ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.

ತುಳು ಜನಪದ, ದೈವಾರಾಧನೆ ಕುರಿತು ಅನೇಕ ಪುಸ್ತಕಗಳನ್ನು ಬರೆದ ಡಾ.ಪಾಲ್ತಾಡಿಯವರು, ಜಿಲ್ಲೆಯಾದ್ಯಂತ ತುಳು ಜಾನಪದದ ಬಗ್ಗೆ ಅನೇಕ ಉಪನ್ಯಾಸ, ತರಬೇತಿ, ತುಳು లిಪಿ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟಿದ್ದರು. ತುಳು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅನೇಕ ತುಳು ಗ್ರಂಥಗಳ ಪ್ರಕಟಣೆಗೆ ಕಾರಣರಾಗಿದ್ದರು.

- Advertisement -
spot_img

Latest News

error: Content is protected !!