ಪದ್ಮುಂಜ: ಲಾಕ್‌ಡೌನದಿಂದ ನಿತ್ಯ ದುಡಿದು ತಿನ್ನುವ ಮಧ್ಯಮ ಹಾಗೂ ಬಡವರ್ಗ ದಿನನಿತ್ಯ ಜೀವನದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೊರೊನಾ ತೊಲಗಿಸಲು ಲಾಕ್‌ಡೌನ್‌ದಿಂದ ಕಷ್ಟವಾದರೂ ಸಹಿಸಿಕೊಳ್ಳಬೇಕಾಗಿದೆ. ಇಂಥ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವ ಧರ್ಮ. ಈ ಹಿನ್ನೆಲೆಯಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಬೆಳ್ತಂಗಡಿ ಬಿಜೆಪಿಯ ಯುವ ನಾಯಕ ರಕ್ಷಿತ್ ಶೆಟ್ಟಿಯವರ ವ್ಯಯುಕ್ತಿಕ ನೆಲೆಯಲ್ಲಿ ಕಣಿಯೂರು ಗ್ರಾಮದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಸುಮಾರು 20 ಬಡಕುಟುಂಬಗಳಿಗೆ ತಲಾ 20ಕೆಜಿ ಯಂತೆ 4 ಕಿಂಟ್ವಾಲ್ ಅಕ್ಕಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಸಾಲಿಯಾನ್, ಸಿಎ ಬ್ಯಾಂಕ್ ನ ನಿರ್ದೇಶಕರಾದ ಕೇಶವ ಪೂಜಾರಿ, ದಿನೇಶ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಿರಾಡಿ ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಘದ ವತಿಯಿಂದ ನಿರಾಶ್ರಿತರಿಗೆ ವಿನೂತನ ರೀತಿಯಲ್ಲಿ ಸಹಾಯ
ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಪಡಿತರ ವಿತರಣೆಯ ಸಂದರ್ಭದಲ್ಲಿ ನಿರಾಶ್ರಿತರಿಗೆ ಅಕ್ಕಿ ಸಹಾಯ ಮಾಡಲು ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿಯವರ ಮುತುವರ್ಜಿಯಲ್ಲಿ ಬ್ಯಾರಲ್ ಇಟ್ಟಿದ್ದು, ಪಡಿತರ ಪಡೆಯಲು ಬರುವ ಜನರು ಇಷ್ಟಾನುಸಾರ ತಮ್ಮ ಪಡಿತರದಿಂದ ಸ್ವಲ್ಪ ಅಕ್ಕಿಯನ್ನು ಈ ಬ್ಯಾರಲ್ ಗೆ ಹಾಕಲು ಮನವಿ ಮಾಡಲಾಗಿತ್ತು. ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಸುಮಾರು 2 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. ಈ ಅಕ್ಕಿಯನ್ನು ಪಡಿತರ ಕಾರ್ಡ್ ಇಲ್ಲದ ನಿರಾಶ್ರಿತರಿಗೆ ನೀಡಲಾಗುತ್ತಿದೆ.
ಕಡಿಮೆ ದರದಲ್ಲಿ ಈರುಳ್ಳಿ ವಿತರಣೆ:
ಮಧ್ಯವರ್ತಿಗಳ ಹಾವಳಿಯಿಂದ ಈರುಳ್ಳಿ ಬೆಲೆ ಏರಿಕೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಕೇವಲ 16 ರೂಪಾಯಿಗೆ ಗ್ರಾಹಕರಿಗೆ ಈರುಳ್ಳಿ ಮತ್ತು ಮೆಣಸು ತರಿಸಿ ವಿತರಿಸಲಾಯಿತು.