ಮೂಡುಬಿದಿರೆ: ದೇಶಾದ್ಯಂತ ಫೆಬ್ರವರಿ 12ರಂದು ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ರೈತ–ಕಾರ್ಮಿಕರ ಜಂಟಿ ಸಮಿತಿಯ ಆಶ್ರಯದಲ್ಲಿ ಅಖಿಲ ಭಾರತ ಮಹಾ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಇದರ ಪೂರ್ವಭಾವಿಯಾಗಿ ಮೂಡುಬಿದಿರೆಯಲ್ಲಿ ವಾಹನ ಜಾಥಾ ನಡೆಯಿತು.
`ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳುವ ಉದ್ದೇಶವನ್ನು ಕೇಂದ್ರ ಸರ್ಕಾರವು ಹೊಂದಿದ್ದು, ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು, ಕಾರ್ಮಿಕ ಚಳವಳಿಗಳನ್ನು ಹತ್ತಿಕ್ಕುವ ಸಲುವಾಗಿ ನಾಲ್ಕು ಸಂಹಿತೆಗಳನ್ನು ಜಾರಿಗೆ ತಂದಿದೆ. ಇದು ಕಾರ್ಮಿಕರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸುತ್ತದೆ. ಈ ಮುಷ್ಕರದಲ್ಲಿ ಸಾಮಾನ್ಯ ವರ್ಗದವರು ಕೈಜೋಡಿಸಬೇಕು. ಒಂದು ದಿನದ ದುಡಿಮೆಯನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು,ʼ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ವಾಹನ ಜಾಥದಲ್ಲಿ ಎಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಯಾದವ ಶೆಟ್ಟಿ, ವಸಂತ ಆಚಾರ, ರಮಣಿ, ಯೋಗೀಶ್ ಜಪ್ಪಿನಮೊಗರು, ಕಾರ್ಮಿಕ ಮುಖಂಡರು, ಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


