ಕೊಣಾಜೆ: ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಾಜೆ ಬೆಟ್ಟುವಿನ ರಸ್ತೆ ಅತಿಕ್ರಮಣದಿಂದ ಸಂಕಷ್ಟಕ್ಕೀಡಾ ಗಿರುವ ರಸ್ತೆ ವಂಚಿತ ಕುಟುಂಬಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಕುರ್ನಾಡು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ʻರಸ್ತೆ ಶೀಘ್ರ ತೆರವಾಗದಿದ್ದಲ್ಲಿ ಸಂಬಂಧಿಸಿದ ಕುಟುಂಬಗಳು ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಿವೆ ಎಂದರು.
ಏಕಾಏಕಿ ರಸ್ತೆ ಮುಚ್ಚಿರುವುದರಿಂದ ಜೀವನಕ್ಕೆ ಕಷ್ಟವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಕ್ಕಳನ್ನು ಸ್ಥಳೀಯ ಕಾಲುದಾರಿಯಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ನಮಗೆ ಅತ್ಯಂತ ಅಗತ್ಯ ಎಂದು ರಸ್ತೆ ವಂಚಿತ ದೇವಕಿ ಹೇಳಿದರು.
ಪ್ರತಿಭಟನೆ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ಅತಿಕ್ರಮಣಗೊಂಡ ರಸ್ತೆಯನ್ನು ತೆರವುಗೊಳಿಸುವ ಭರವಸೆ ನೀಡಿದರು.
ಈ ಸಂದರ್ಭ ವಿವಿಧ ಸಂಘಗಳ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದ್ದರು.


