ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಎ.14ರವರೆಗೆ ವಿಧಿಸಿರುವ ಸೆ.144(3)ಕ್ಕೆ ಪೂರಕವಾಗಿ ದಕ್ಸಿಣ ಕನ್ನಡ ಜಿಲ್ಲೆಯಲ್ಲಿ ಇಂದು ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪಾಸ್ ಇಲ್ಲದೆ ಸಂಚರಿಸುತ್ತಿದ್ದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬ್ಯಾಂಕ್‌ನವರು ತಮ್ಮ ಸಿಬ್ಬಂದಿ ವರ್ಗದ ಪಟ್ಟಿಯನ್ನು ಮತ್ತವರ ಮನೆಯಿಂದ ಬ್ಯಾಂಕ್‌ಗೆ ಹೋಗುವ ರೂಟ್ ಮ್ಯಾಪ್‌ನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅತೀ ತುರ್ತು ವೈದ್ಯಕೀಯ ಸೇವೆಗಳಾದ ಡಯಾಲಿಸಿಸ್, ಕಿಮೋಥೆರಪಿ ಹಾಗೂ ಗರ್ಭಿಣಿಯರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಕಂಟ್ರೋಲ್ ರೂಮ್ (ಟೋಲ್ ಫ್ರೀ ಸಂ: 1077)ಗೆ ಕರೆ ಮಾಡಿದರೆ ಅಥವಾ ವಾಟ್ಸಪ್ ಸಂ: 9483908000ಗೆ ಮೆಸೇಜ್ ಮಾಡಿದಲ್ಲಿ ಒಂದು ದಿನದ ತುರ್ತು ವೈದ್ಯಕೀಯ ಇ-ಪಾಸ್‌ಗಳನ್ನು ಕಂಟ್ರೋಲ್ ರೂಮ್‌ನಿಂದಲೇ ವಿತರಿಸಲಾಗುವುದು. ಉಳಿದ ವೈದ್ಯಕೀಯ ಸೇವೆಗೆ 108 ಅಥವಾ 1077ಕ್ಕೆ ಕರೆ ಮಾಡಿದಲ್ಲಿ ಆಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಎ.5ರಿಂದ ಎ.7ರವರೆಗೆ ನ್ಯಾಯಬೆಲೆ ಅಂಗಡಿ ತೆರೆದಿಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.