ಮಂಗಳೂರು: ನಗರ ಹಾಗೂ ಸುತ್ತಲಿನ ಪ್ರದೇಶವನ್ನು “ಸುರಕ್ಷಿತ ವಲಯ’ವನ್ನಾಗಿ ಮಾಡಲು ಮಂಗಳೂರು ಪೊಲೀಸರು ಹೆಜ್ಜೆ ಇಟ್ಟಿದ್ದು ಸ್ಫೋಟಕ ಸಾಮಗ್ರಿಗಳ ದಾಸ್ತಾನಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ.
ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿ ಸೂಕ್ತ ಅಂತರ ಕಾಪಾಡುವುದು ಸೇರಿದಂತೆ ಅಗ್ನಿಶಾಮಕ ಇಲಾಖೆಯ ನಿಯಮಗಳನ್ನು ಪಾಲಿಸುವುದು ಕಷ್ಟಸಾಧ್ಯ. ಮಾತ್ರವಲ್ಲದೆ ಮಂಗಳೂರು ವಿವಿಧ ರೀತಿಯಲ್ಲಿ ಸೂಕ್ಷ್ಮ ನಗರವಾಗಿದೆ. ಹಾಗಾಗಿ ಸ್ಫೋಟಕ ಸಾಮಗ್ರಿಗಳ ದಾಸ್ತಾನುಗಳ ಸಂಗ್ರಹಕ್ಕೆ ಅವಕಾಶ ನೀಡದಿರಲು ಅಗ್ನಿ ಶಾಮಕ ಇಲಾಖಾಧಿಕಾರಿಗಳು ಮತ್ತು ಪೊಲೀಸರು ನಿರ್ಧರಿಸಿದ್ದಾರೆ.
ಮಂಗಳೂರು ನಗರ ಸಹಿತ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 11 ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕೇಂದ್ರ/ ಮಳಿಗೆಗಳಿಗೆ ನೋಟಿಸ್ ನೀಡಿ ತೆರವುಗೊ ಳಿಸಲು ಸೂಚಿಸಲಾಗಿದೆ. ಈ ಪೈಕಿ ನಗರದ ಬಹುತೇಕ ಮಂದಿ ಸ್ಫೋಟ ಸಾಮಗ್ರಿ ದಾಸ್ತಾನು/ ಮಾರಾಟ ವ್ಯಾಪಾರಸ್ಥರು ತೆರವುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರು ಪೊಲೀಸರು ಇದೇ ಮೊದಲ ಬಾರಿಗೆ ಎಂಬಂತೆ ಕಳೆದೆರಡು ತಿಂಗಳುಗಳಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಿ 1,600 ಕೆ.ಜಿ.ಗೂ ಅಧಿಕ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ ಪೊಟ್ಯಾಶಿಯ ನೈಟ್ರೇಟ್, ಬೇರಿಯಂ ನೈಟ್ರೇಟ್, ಅಲ್ಯುಮೀನಿಯಂ ಪೌಡರ್, ಗನ್ ಪೌಡರ್, ಗಂಧಕದ ಪೌಡರ್ ಮೊದಲಾದವು ಸೇರಿವೆ.
ಮಂಗಳೂರು ನಗರವು ಉಡುಪಿ, ಚಿಕ್ಕಮಗಳೂರಿನ ನಕ್ಸಲ್ ಪ್ರದೇಶಗಳಿಗೆ ಸಮೀಪವಿದ್ದು, ಇದು ಸೂಕ್ಷ್ಮ ಕೇಂದ್ರ. ಇಲ್ಲಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸುವುದು ಆಂತರಿಕ ಭದ್ರತೆಗೂ ಅಪಾಯ. ಇಂತಹ ಸ್ಫೋಟಕಗಳು ದುಷ್ಕರ್ಮಿಗಳಿಗೆ ದೊರೆತರೆ ಭಾರೀ ಅನಾಹುತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅಗ್ನಿ ಅವಘಡದಂತಹ ಅಪಾಯವೂ ಹೆಚ್ಚು ಅಂತ , ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.