ಬೆಂಗಳೂರು: ಲಾಕ್ ಡೌನ್ ನಿಂದಾಗಿ ರಾಜ್ಯದ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಿ ಕೆಲ ವಾರಗಳೇ ಆಗಿವೆ. ಈ ನಡುವೆ ಕುಡುಕರ ಮೇಲೆ ಕೊರೊನಾ ಸೈಡ್ ಎಫೆಕ್ಟ್ ಜಾಸ್ತಿ ಆದಂತೆ ಕಾಣುತ್ತಿದೆ. ಖಿನ್ನತೆಗೆ ಒಳಗಾಗಿ ಇದುವರೆಗೂ 10ಕ್ಕೂ ಹೆಚ್ಚು ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರದಿ ತಿಳಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೇರಳ ಮಾದಿಯನ್ನು ಅನುಷ್ಠಾನಕ್ಕೆ ತರಬಹುದು ಎಂಬ ಊಹೆ ಸುಳ್ಳಾಗಿದೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 14ರವರೆಗೂ ಮದ್ಯದಂಗಡಿ ತೆರಯುವ ಪ್ರಶ್ನೆಯೇ ಇಲ್ಲ. ಮದ್ಯ ಬೇಕು ಎನ್ನುವವರು ಇನ್ನೂ ಎರಡು ವಾರ ಕಾಯಲೇ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ಈಗಲೇ ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ ಎಂದಿದ್ದಾರೆ. ಅಲ್ಲದೆ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.
ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ ಒಬ್ಬ ಸಾರಾಯಿ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಒಬ್ಬರು ಸಾರಾಯಿಗಾಗಿ ಪ್ರಾಣ ಬಿಟ್ಟಿದ್ದರು. ಈ ಮಧ್ಯೆ, ಕೇರಳದಲ್ಲಿ 45 ಮಂದಿ ಕುಡುಕರು, ವೈದ್ಯರಿಂದ ಚೀಟಿ ಬರೆಯಿಸಿಕೊಂಡು ಮದ್ಯ ಪಡೆದುಕೊಂಡಿದ್ದಾರೆ.