ತನ್ನ ಮಗಳನ್ನು ಲವ್ ಮಾಡಿ ಮದುವೆಯಾದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಅಳಿಯನನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಎಂ.ಸುಧಾಕರ್ ಮೃತ ದುರ್ದೈವಿ. ಈ ಕೊಲೆಗೆ ಅಂತರ್ ಜಾತಿ ವಿವಾಹವವೇ ಕಾರಣ ಎಲ್ಲಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಮತ್ತು ಸೋದರ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ
ಮೃತ ಸುಧಾಕರ್ 19 ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಆರು ತಿಂಗಳ ನಂತರ ಇಬ್ಬರೂ ಮನೆಬಿಟ್ಟು ಓಡಿಹೋಗಿದ್ದು, ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ವಾಲಜಾಪೇಟೆಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ನಂತರ 10 ದಿನಗಳ ಕಾಲ ಮನೆ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದರು. ಆದರೆ ಇಬ್ಬರು ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಸಿರಲಿಲ್ಲ. ಇತ್ತ ಹುಡುಗಿಯ ಕುಟುಂಬದವರು ಇಬ್ಬರನ್ನು ಪತ್ತೆ ಹಚ್ಚಿದ್ದಾರೆ. ನಂತರ ಸ್ಥಳೀಯ ಪಂಚಾಯಿತಿ ಮೂಲಕ ಇಬ್ಬರನ್ನ ಬೇರೆ ಬೇರೆ ಮಾಡಿದ್ದಾರೆ. ಅಲ್ಲದೇ ಸುಧಾಕರ್‌ಗೆ ಬೆದರಿಕೆ ಕೂಡ ಹಾಕಿದ್ದಾರೆ. ಕೊನೆಗೆ ಸುಧಾಕರ್ ತನ್ನ ಪ್ರಾಣಕ್ಕೆ ಹೆದರಿ ಚೆನ್ನೈಗೆ ಓಡಿ ಹೋಗಿದ್ದನು.
ಆದರೆ ಇಡೀ ದೇಶಾದ್ಯಂತ ಕೊರೊನಾ ವೈರಸ್ ಹಬ್ಬಿದ ಕಾರಣ ಲಾಕ್‍ಡೌನ್ ಮಾಡಲಾಗಿತ್ತು. ಕೊನೆಗೆ ಸುಧಾಕರ್ ಒಂದು ವಾರದ ಹಿಂದೆ ತನ್ನ ಗ್ರಾಮಕ್ಕೆ ಬಂದಿದ್ದನು. ಇದೇ ವೇಳೆ ಹುಡುಗಿಯ ತಂದೆ ಮೂರ್ತಿ ಮತ್ತು ಸೋದರ ಸಂಬಂಧಿ ಸೇರಿಕೊಂಡು ಸುಧಾಕರ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.