ಬೆಳ್ತಂಗಡಿ: ನಿಡಿಗಲ್ ನೂತನ ಸೇತುವೆಯ ಕಳಪೆ ಕಾಮಗಾರಿ ಮತ್ತೆ ಸಾಬೀತಾಗಿದ್ದು ಈಗಾಗಲೇ ನಿರ್ಮಾಣವಾಗಿ ವರ್ಷ ಪೂರೈಸುವ ಮುನ್ನ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಬಿರುಕು ಕಂಡು ದುರಸ್ತಿ ಪಡಿಸಿದ ಬಳಿಕವೂ ಎರಡನೇ ಬಾರಿಗೆ ಸಮೀಪದಲ್ಲೇ ಮತ್ತೊಂದು ಸಣ್ಣ ಪ್ರಮಾಣದ ಹೊಂಡ ನಿರ್ಮಾಣವಾಗಿದೆ.
ಈ ಹಿಂದೆ ಬಿರುಕು ಕಾಣಿಸಿಕೊಂಡಿದ್ದ ಭಾಗಕ್ಕೆ ಮರು ಕಾಂಕ್ರೀಟ್ ಮಾಡಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದರು. ಈ ಬಾರಿ ಮತ್ತೆ ಬಿರುಕು ಕಾಣಿಸಿಕೊಂಡು ಸಾಮಾನ್ಯ ಗಾತ್ರದ ಹೊಂಡ ನಿರ್ಮಾಣವಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾತ್ರದ ವಾಹನ ಸಂಚಾರಕ್ಕೆ ನಿಷೇಧ ಇರುವ ಕಾರಣ ಘನ ವಾಹನಗಳು ಸಂಚರಿಸುತ್ತಿಲ್ಲ. ಆದರೂ ಈಗಾಗಲೇ ಸೇತುವೆಯಲ್ಲಿ ಎರಡು ಬಾರಿ ಬಿರುಕು ಕಾಣಿಸಿಕೊಂಡಿದೆ.
ಮೇಲ್ಪದರದಲ್ಲಿ ಬಿರುಕು ಕಂಡು ಬಂದಿದ್ದು ಅದನ್ನು ತಕ್ಷಣ ಮುಚ್ಚಲಾಗಿದೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಮಳೆ ಕಡಿಮೆಯಾದ ತತ್‌ಕ್ಷಣ ಸೇತುವೆಯ ವ್ಯಾಪ್ತಿಗೆ ಉತ್ತಮ ಗುಣಮಟ್ಟದ ಡಾಮರು ಹಾಕಲಾಗುವುದು ಇದರಿಂದ ಸೇತುವೆ ಮೇಲ್ಪದರ ಹೆಚ್ಚು ಬಲಶಾಲಿ ಆಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತೆ ಸಮರ್ಥನೆ ನೀಡಿ ಗುಂಡಿ ಮುಚ್ಚುವ ಕಾರ್ಯ ನಡೆಸಿದ್ದಾರೆ