ಸುಳ್ಯ: ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ ಹೊಸ ಮನೆಯನ್ನು ಹಸ್ತಾಂತರ ಮಾಡಲಾಗಿದೆ.
ಮಸೂದ್ ಕುಟುಂಬಕ್ಕೆ ಅನೇಕ ದಾನಿಗಳು, ಸಂಘಟನೆಗಳು, ರಾಜಕೀಯ ನಾಯಕರುಗಳು ಭೇಟಿ ನೀಡಿ ಸಾಂತ್ವನ ಮತ್ತು ಸಹಾಯ ಹಸ್ತವನ್ನು ಚಾಚಿದ್ದರು. ಈ ಪೈಕಿ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಸೆಂಟ್ರಲ್ ಕಮಿಟಿಯಿಂದ ನೀಡಿದ 30 ಲಕ್ಷ ರೂ., ತಾಲೂಕು ಜಮಾಅತ್ ಮತ್ತು ದಾನಿಗಳು ನೀಡಲಾದ ಮೊತ್ತದಲ್ಲಿ ಸುಳ್ಯ ತಾಲೂಕು ಬೆಳ್ಳಾರೆ ಎಂಬಲ್ಲಿ ಮನೆಯನ್ನು ಹಾಗೂ ಉಳಿದ ಮೊತ್ತದಲ್ಲಿ ಮಸೂದ್ ಸಹೋದರಿಯ ಮದುವೆಗೆ ಚಿನ್ನಾಭರಣ ಖರೀದಿಸುವ ಯೋಜನೆ ರೂಪಿಸಿ ನಿನ್ನೆ ಬೆಳ್ಳಾರೆಯಲ್ಲಿ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರಿಸಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮನೆ ಇಲ್ಲದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ನಿರ್ಗತಿಕ ಕುಟುಂಬ ಸಂಕಷ್ಟದಲ್ಲಿದ್ದಾಗ ಜಾತಿ, ಮತ ಭೇದ ಇಲ್ಲದೆ ನೆರವಿಗೆ ಧಾವಿಸಿ ಸಾಂತ್ವನ ಹೇಳಿ ಸಹಾಯ ಮಾಡಿ ಮಾನವೀಯತೆ ಮೆರೆದ ಎಲ್ಲರಿಗೂ ನಮ್ಮ ಅಭಿನಂದನೆಗಳು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಪರಸ್ಪರ ಸೌಹಾರ್ದತೆಯಿಂದ ದೇಶದ ಜಾತ್ಯತೀತ ಮೌಲ್ಯದ ಸೌಂದರ್ಯ ಹೆಚ್ಚಿಸಲು ಕಾರಣ ಕಾರಣಕರ್ತರಾಗೋಣ ಎಂದರು.


