ಕುಂದಾಪುರ: ಈಗಾಗಲೇ ಕುಂದಾಪುರ ಪರಿಸರದಲ್ಲಿ ಟ್ರೋಲ್ಸ್ ಮತ್ತು ಇನ್ನಿತರ ವಿಭಿನ್ನ ರೀತಿಯ ಸಮಾಜಮುಖಿ ಕೆಲಸಗಳಿಂದ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ “ಟ್ರೋಲ್ ಕುಂದಾಪ್ರದ್ ಕುಡಿ” ಸಾಮಾಜಿಕ ಜಾಲತಾಣ ಪೇಜ್ ಇಂದು ನಮ್ಮ ಗ್ರಾಮೀಣ ಭಾಷೆಯಾದ ಕುಂದಗನ್ನಡ ಬೆಳವಣಿಗೆಗೆ ಕುಂದಾಪ್ರಗನ್ನಡ ವಿಡಿಯೋ ಚಾಲೆಂಜ್ ಅನ್ನು ಎಲ್ಲಾ ಕುಂದಾಪ್ರದ ಜನತೆಗೆ ನೀಡಿದ್ದಾರೆ.
ಇದರಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ತರುವ ಹಾಗೂ ಮುಖ್ಯವಾಗಿ ಕುಂದಗನ್ನಡವನ್ನು ಆದಷ್ಟು ಜನರಿಗೆ ಅತೀ ವೇಗವಾಗಿ ಕರ್ನಾಟಕದ ಎಲ್ಲಾ ಭಾಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಈ ಬಗ್ಗೆ ಕುಂದಾಪ್ರದ್ ಕುಡಿ ಟ್ರೋಲ್ ಪೇಜ್ ಸಂಸ್ಥಾಪಕ ಅಡ್ಮಿನ್ ಶಾಶ್ವತ್ ಶೆಟ್ಟಿ ಅವರು ಹೇಳುವ ಹಾಗೆ, ಈಗಾಗಲೇ ಜನರು ತಮ್ಮ ಬಿಡುವಿನ ಸಮಯವನ್ನು ಮನೋರಂಜನೆಗಾಗಿ ವಿಡಿಯೋ ಮಾಡಲು ಉಳಿದ ಭಾಷೆಗಳಲ್ಲಿನ ಡೈಲಾಗ್ ಅಥವಾ ಹಾಡುಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ, ಅದೇ ಪ್ರಯತ್ನವನ್ನು ನಮ್ಮ ಕುಂದಗನ್ನಡದಲ್ಲಿ ಮಾಡಿದಾಗ ಇತರರಿಗೆ ನಮ್ಮ ಭಾಷೆಯ ಸೊಗಡು ತಿಳಿಯುತ್ತದೆ ಹಾಗೂ ನಮ್ಮ ಜನರಿಗೆ ಭಾಷೆಯ ಮೇಲಿನ ಪ್ರೀತಿ ಹೆಚ್ಚುತ್ತದೆ. ಮಾತ್ರವಲ್ಲದೆ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಾರೆ. ಇದರಿಂದ ಮುಂದೆ ಕುಂದಗನ್ನಡ ಆಲ್ಬಂ, ಕಿರುಚಿತ್ರ ಹಾಗೂ ಸಿನೆಮಾಗಳಿಗೆ ಬೇಡಿಕೆ ದೊರೆತಂತಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜನರಿಂದ ಸಾಕಷ್ಟು ಮೆಚ್ಚುಗೆಯ ಅಭಿಪ್ರಾಯದೊಂದಿಗೆ ಬಹಳಷ್ಟು ಕುಂದಗನ್ನಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ನಮಗೆ ಸಂತಸದ ವಿಷಯವೆಂದು ತಿಳಿಸಿದ್ದಾರೆ.
ಸ್ಟಾರ್ಸ್ ಗಳಿಗೆ ನೀಡಲಿದ್ದೇವೆ ಚಾಲೆಂಜ್
ನಮ್ಮ ಕುಂದಾಪ್ರ ಭಾಗದ ಹಲವಾರು ಕಲಾವಿದರು ಇಂದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದಾರೆ. ಅವರನ್ನು ಗುರುತಿಸಿ ಅವರಿಗೆ ಮನವಿ ಮಾಡಿಕೊಂಡು ಚಾಲೆಂಜ್ ನೀಡಲಿದ್ದೇವೆ. ಇದರಿಂದ ಮತ್ತಷ್ಟು ಜನರು ಪ್ರೇರೇಪಣೆಗೊಂಡು ಕುಂದಗನ್ನಡ ಬೆಳವಣಿಗೆಯಲ್ಲಿ ಸಹಕಾರಿಯಾಗಬಹುದೆಂಬ ನಿರೀಕ್ಷೆ ಇದೆ.
ಸ್ವದೇಶಿ ಆ್ಯಪ್ ಮತ್ತು ಮೊಬೈಲ್ ಕ್ಯಾಮರಾಕ್ಕೆ ಒತ್ತು
ಇಲ್ಲಿ ಎಲ್ಲರೂ ಗಮನಿಸಿಬೇಕಾದದ್ದು, ಈಗಾಗಲೇ ಎಲ್ಲರೂ ವಿದೇಶಿ ಕಂಪನಿಗಳ ಡಬ್ಸ್ ಸ್ಮಾಶ್ ಆ್ಯಪ್ ಅನ್ನು ಅನ್ ಇನ್ಟಾಲ್ ಮಾಡುವ ನಿರ್ಧಾರವನ್ನು ಈ ತಂಡವು ಪ್ರೋತ್ಸಾಹಿಸಿ, ಇಲ್ಲಿ ವಿಡಿಯೋ ಮಾಡುವವರು ಸ್ವದೇಶಿ ಆ್ಯಪ್ ಹಾಗೂ ಮೊಬೈಲ್ ಕ್ಯಾಮರಾ ಬಳಸಿ ವಿಡಿಯೋ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೀವು ಕೂಡ ಕುಂದಗನ್ನಡ ಚಾಲೆಂಜ್ ತೆಗೆದುಕೊಂಡು ಕುಂದಗನ್ನಡ ಬೆಳಸುವಲ್ಲಿ ಸಹಕಾರಿಯಾಗಿ ಎಂದು ಟೀಮ್ ಟ್ರೋಲ್ ಕುಂದಾಪ್ರದ್ ಕುಡಿ ಮನವಿ ಮಾಡಿಕೊಂಡಿದ್ದಾರೆ.