ನಾಸಿಕ್: ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ವ್ಯಾಪಕವಾಗಿ ವೈರಲ್ ಆದ ಪರಿಣಾಮ ಜುಲೈ 18ರಂದು ನಿಗದಿಯಾಗಿದ್ದ ಅಂತರ್-ಧರ್ಮೀಯ ವಿವಾಹವನ್ನು ಕುಟುಂಬಸ್ಥರು ರದ್ದು ಮಾಡಿದ ಘಟನೆ ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆದಿದೆ.
ಹಿಂದೂ ಸಂಘಟನೆಗಳ ಸದಸ್ಯರ ಒತ್ತಡಕ್ಕೆ ಮಣಿದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ 28 ವರ್ಷದ ಯುವತಿಯ ಪೋಷಕರು ಮುಸ್ಲಿಂ ವ್ಯಕ್ತಿಯೊಂದಿಗಿನ ವಿವಾಹ ಸಮಾರಂಭವನ್ನು ರದ್ದುಗೊಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಯುವಕನು ಕೆಲವು ವರ್ಷಗಳ ಹಿಂದೆ ಯುವತಿಯ ಖಾಸಗಿ ಬೋಧಕನಾಗಿದ್ದ, ಆ ವೇಳೆಗಿನ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆವರೆಗೂ ಮುಂದುವರೆದಿದೆ ಎಂದು ಯುವತಿಯ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ವಿವಾಹ ಆಮಂತ್ರಣ ಪತ್ರ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ಪತ್ರ ಬರೆದಿರುವ ಯುವತಿ ತಂದೆ, ಆಭರಣ ವ್ಯಾಪಾರಿ, ‘ಪ್ರಸ್ತುತ ಪರಿಸ್ಥಿತಿ’ಯಿಂದಾಗಿ ಜುಲೈ 18 ರ ವಿವಾಹ ಸಮಾರಂಭವನ್ನು ನಡೆಸದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ

ಇವರಿಬ್ಬರು ಸ್ಥಳೀಯ ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನ ನೋಂದಾಯಿಸಿದ್ದರು.
ಪುತ್ರಿಯ ಮದುವೆಯನ್ನ ಹಿಂದೂ ಸಂಪ್ರದಾಯದಂತೆಯೇ ಮಾಡಬೇಕೆಂದು ಪ್ರಸಾದ್ ಬಯಸಿದ್ದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ನಲ್ಲಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿತ್ತು. ಹಿಂದೂ ಸಂಪ್ರದಾಯದಂತೆ ವಿವಾಹವಾಗಲು ವರನ ಕುಟುಂಬಸ್ಥರಿಂದ ಯಾವುದೇ ಅಡ್ಡಿ ಇರಲಿಲ್ಲ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಸಮುದಾಯ ಸಂಸ್ಥೆಯ ಪದಾಧಿಕಾರಿಯೂ ಆಗಿರುವ ಮಹಿಳೆಯ ತಂದೆ, ಕುಟುಂಬ ಸದಸ್ಯರನ್ನು ಸಮಾಲೋಚಿಸಿ ವಿವಾಹ ಸಮಾರಂಭವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.