Thursday, November 12, 2026
Homeತಾಜಾ ಸುದ್ದಿಕೇರಳದ ವಯನಾಡಿನ ಕಲ್ಯಾಣಿ ಅಮ್ಮನಿಗೆ ಮುಸ್ಲಿಂ ಸಹೋದರರಿಂದ ಅಗ್ನಿಸ್ಪರ್ಶ: ಜಾತಿ-ಧರ್ಮ ಮೀರಿದ ಮಮತೆಗೆ ಕೇರಳ ಸಿಎಂ...

ಕೇರಳದ ವಯನಾಡಿನ ಕಲ್ಯಾಣಿ ಅಮ್ಮನಿಗೆ ಮುಸ್ಲಿಂ ಸಹೋದರರಿಂದ ಅಗ್ನಿಸ್ಪರ್ಶ: ಜಾತಿ-ಧರ್ಮ ಮೀರಿದ ಮಮತೆಗೆ ಕೇರಳ ಸಿಎಂ ಮೆಚ್ಚುಗೆ

- Advertisement -
- Advertisement -

ಕೇರಳ; ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಗೋಡೆಗಳನ್ನು ನಿರ್ಮಿಸುವ ಪ್ರಸ್ತುತ ಕಾಲಘಟ್ಟದಲ್ಲಿ, ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಮಾನವೀಯತೆಗೆ ಹೊಸ ಭಾಷ್ಯ ಬರೆದಿದೆ. ಸುಮಾರು ಐದು ದಶಕಗಳ ಕಾಲ ಹೆತ್ತ ತಾಯಿಯಂತೆ ಸಾಕಿ ಸಲಹಿದ 85 ವರ್ಷದ ಹಿಂದೂ ವೃದ್ಧೆ ಕಲ್ಯಾಣಿ ಅಮ್ಮ ಅವರಿಗೆ ಅಕ್ಕಪಕ್ಕದ ಮನೆಯ ಮುಸ್ಲಿಂ ಸಹೋದರರು ಹಿಂದೂ ಸಂಪ್ರದಾಯದಂತೆಯೇ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ವಯನಾಡ್ ಜಿಲ್ಲೆಯ ಮೂಪ್ಪೈನಾಡ್ ಪಂಚಾಯತ್ ವ್ಯಾಪ್ತಿಯ ಚಿತ್ರಗಿರಿಯ ನಿವಾಸಿಯಾಗಿದ್ದ ಕಲ್ಯಾಣಿ ಅಮ್ಮ ಅವರಿಗೆ ಸ್ವಂತ ಮಕ್ಕಳಾಗಲಿ, ಹತ್ತಿರದ ಸಂಬಂಧಿಕರಾಗಲಿ ಇರಲಿಲ್ಲ. ಇಳಿ ವಯಸ್ಸಿನಲ್ಲಿ ಒಂಟಿಯಾಗಿದ್ದ ಅವರಿಗೆ ಆಸರೆಯಾಗಿ ನಿಂತಿದ್ದು ನೆರೆಮನೆಯ ಮುಸ್ಲಿಂ ಸಹೋದರರಾದ ರಝಾಕ್ ಮತ್ತು ಸುಲೈಮಾನ್ ಅವರ ಕುಟುಂಬ. ರಝಾಕ್ ಅವರಿಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗಿನಿಂದಲೂ ಕಲ್ಯಾಣಿ ಅಮ್ಮ ಅವರ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು.

ವಯೋಸಹಜ ಅನಾರೋಗ್ಯ ಕಾಡಿದಾಗ ಹಾಗೂ ಹಿಂದೊಮ್ಮೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಲ್ಯಾಣಿ ಅಮ್ಮ ತೀವ್ರವಾಗಿ ಗಾಯಗೊಂಡಾಗಲೂ ಈ ಸಹೋದರರು ಅವರ ಕೈಬಿಡಲಿಲ್ಲ. ತಮ್ಮದೇ ಮನೆಯಲ್ಲಿಟ್ಟುಕೊಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದ್ದರು. “ಕಲ್ಯಾಣಿ ಅಮ್ಮ ನಮ್ಮ ಮನೆಯಲ್ಲಿ ಇದ್ದಿದ್ದು ನಮ್ಮ ಪುಣ್ಯ. ಅವರ ಸೇವೆ ನಮಗೆಂದೂ ಹೊರೆ ಎನಿಸಲಿಲ್ಲ, ಎಲ್ಲಾ ಹಬ್ಬಗಳನ್ನು ನಾವು ಒಟ್ಟಿಗೇ ಆಚರಿಸುತ್ತಿದ್ದೆವು” ಎಂದು ರಝಾಕ್ ಅವರ ಪತ್ನಿ ಭಾವುಕರಾಗಿ ನೆನೆಯುತ್ತಾರೆ.

ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಕಲ್ಯಾಣಿ ಅಮ್ಮ ನಿಧನರಾದರು. ಆಗ ಅವರ ಕೊನೆಯ ಆಸೆಯಂತೆ, ಸ್ವಂತ ಮಕ್ಕಳ ಸ್ಥಾನದಲ್ಲಿ ನಿಂತ ರಝಾಕ್ ಮತ್ತು ಸುಲೈಮಾನ್ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತಿಮ ವಿದಾಯ ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ರಝಾಕ್, “ಅವರು ನನ್ನ ತಾಯಿ, ನನ್ನ ಹೆತ್ತ ತಾಯಿಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ. ಅವರಿಗೆ ಯಾರೂ ಇಲ್ಲದಿದ್ದಾಗ ಮಕ್ಕಳಾಗಿ ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ, ಇದರಲ್ಲಿ ಹಿಂಜರಿಕೆ ಏಕೆ?” ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ವಿ.ಡಿ. ಸತೀಶನ್ ಶ್ಲಾಘನೆ: ಈ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ರಝಾಕ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. “ಇದೇ ನಾನು ನಂಬುವ ಮತ್ತು ಪ್ರೀತಿಸುವ ನಿಜವಾದ ಕೇರಳ. ಇಲ್ಲಿ ತಾಯಿಯ ಪ್ರೀತಿ ಧರ್ಮವನ್ನು ನೋಡುವುದಿಲ್ಲ, ಮಗನ ಕರ್ತವ್ಯ ಜಾತಿಯನ್ನು ಕೇಳುವುದಿಲ್ಲ. ಕೇರಳದ ಈ ಮಹಾನ್ ಮಾನವೀಯ ಮೌಲ್ಯ ಇಡೀ ಭಾರತಕ್ಕೆ ಸ್ಫೂರ್ತಿಯಾಗಲಿ” ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಯನಾಡಿಗೆ ಭೇಟಿ ನೀಡಿದಾಗ ಖುದ್ದಾಗಿ ಈ ಕುಟುಂಬವನ್ನು ಭೇಟಿಯಾಗುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!