ಬಂಟ್ವಾಳ: ಸಂಬಂಧಿಕ ಮಹಿಳೆಯೊಬ್ಬಳು ಮೆಸೇಜ್ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಿಮೊಗರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಿಲಿಮೊಗರು ಗ್ರಾಮದ ಪರವರಕೋಡಿ ಎಂಬಲ್ಲಿ ಈ ಘಟನೆ ನಡೆದಿದೆ. ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದು , ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಲ್ಲಿಪಾಡಿ ನಿವಾಸಿ, ಆರೋಪಿ ರಮೇಶ್ ತಲೆಮರೆಸಿಕೊಂಡಿದ್ದಾನೆ.
ರಮೇಶ್ ಮಹಿಳೆ ಲತಾ ಅವರ ಸಂಬಂಧಿಕನಾಗಿದ್ದು, ಮನೆಗೆ ಬಂದು ಹೋಗುತ್ತಿದ್ದ. ಮನೆಯವರ ಜೊತೆ ಸಲುಗೆಯಿಂದ ಇದ್ದು, ಲತಾಗೆ ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದ. ಇದನ್ನು ತಿಳಿದ ಉಮೇಶ್ ಪತ್ನಿಗೆ ಆತನಿಗೆ ಮೆಸೇಜ್ ಹಾಗೂ ಕಾಲ್ ಮಾಡದಂತೆ ತಿಳಿಸಿದ್ದರು. ಲತಾ ಮೆಸೇಜ್ ಮಾಡದ ಕಾರಣ ಆರೋಪಿ ರಮೇಶ್ ಮನೆಗೆ ಬಂದು ವಿಚಾರಿಸಿದ್ದಾನೆ. ಲತಾ ಅವರು ಕಾರಣ ತಿಳಿಸಿದಾಗ ಆರೋಪಿ ರಮೇಶ್ ಅವಾಚ್ಯ ಶಬ್ದಗಳಿಂದ ಬೈದು ಮೈಮುಟ್ಟಲು ಬಂದಿದ್ದು, ವಿರೋಧಿಸಿದ ಲತಾ ಗಂಡನಿಗೆ ತಿಳಿಸುವುದಾಗಿ ಹೇಳಿದಾಗ ಮನೆಯ ಒಳಗೆ ಇದ್ದ ಕತ್ತಿಯನ್ನು ತಂದು ಕೊಲ್ಲುವ ಉದ್ದೇಶದಿಂದ ತಲೆಗೆ ಕಡಿದಿದ್ದಾನೆ. ಲತಾ ಅವರ ಬೊಬ್ಬೆ ಕೇಳಿ ಪಕ್ಕದ ಮನೆಯಲ್ಲಿರುವ ಮೈದುನ ಪ್ರಕಾಶ್ ಹಾಗೂ ಅತ್ತೆ ಕುಸುಮ ಅವರು ಮನೆಗೆ ಬಂದಾಗ ಆರೋಪಿ ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೋಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.